
Sullia: ಕೊಲ್ಲಮೊಗ್ರು ಪಂಚಾಯತ್ ಅವ್ಯವಸ್ಥೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ, ಪಂಚಾಯತ್‌ಗೆ ಮುತ್ತಿಗೆ
Thursday, September 25, 2025
ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿನ ಸೊತ್ತುಗಳನ್ನು ಅಲ್ಲಿನ ಗುಮಾಸ್ತನೇ ಕಳವು ಮಾಡಿದ್ದರೂ ಆತನ ವಿರುದ್ಧ ಪಂಚಾಯತ್ ಸೂಕ್ತ ಕ್ರಮ ಜರುಗಿಸಿಲ್ಲ, ಪಂಚಾಯತ್ ಸಿಸಿ ಟಿವಿ ಅಳವಡಿಸಿ ಜನರ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದು ಅದನ್ನು ವಾಟ್ಸ್ಯಾಪ್‌ನಲ್ಲಿ ಹರಿಯಬಿಡಲಾಗುತ್ತದೆ ಎಂದು ಆರೋಪಿಸಿದ ಗ್ರಾಮಸ್ಥರು ಸೆ. 25ರಂದು ಬೆಳಗ್ಗೆ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತ್ ಗೆ ಸಂಬ0ಧಪಟ್ಟ ಸಿಸಿ ಟಿವಿ ಪರಿಕರ, ಸೌಂಡ್ ಸಿಸ್ಟಮ್ ಗಳನ್ನು ಖಾಸಗಿ ವ್ಯಕ್ತಿಗಳು ಬಳಸುತ್ತಿದ್ದಾರೆ. ಪಂಚಾಯತ್ ಸೊತ್ತುಗಳನ್ನು ಕಳವು ಮಾಡಿದವರು ಯಾರು ? ಸಿಸಿ ಟಿವಿಯ ಫುಟೇಜ್‌ಗಳನ್ನು ವಾಟ್ಸ್ಯಾಪ್ ನಲ್ಲಿ ಹಾಕಿ ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ. ಇದರ ಹಿಂದಿರುವರು ಯಾರು? ಈ ಬಗ್ಗೆ ಪಿಡಿಓ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.
ಪಿಡಿಓ ಚಿನ್ನಪ್ಪ ನಾಯ್ಕ್ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಪಂಚಾಯತ್ ಗುಮಾಸ್ತ ಸಂತೋಷ್ ಪಂಚಾಯತ್ ಸೊತ್ತುಗಳನ್ನು ಕಳವು ಮಾಡಿದ್ದಾನೆ. ಇದರ ಹಿಂದೆ ಪಂಚಾಯತ್ ಉಪಾಧ್ಯಕ್ಷ ಸಾಥ್ ನೀಡಿದ್ದಾರೆ. ಪಂಚಾಯತ್ ಅಧ್ಯಕ್ಷೆ ಈ ಬಗ್ಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಪಂಚಾಯತ್ ಅಧ್ಯಕ್ಷೆ ಮೋಹಿನಿ ಕಟ್ಟ ಮೊಬೈಲ್‌ನಿಂದಲೇ ಗ್ರಾಮಸ್ಥರ ವಿಡಿಯೋ ಬರುತ್ತಿದ್ದು, ಇದರ ಅಡ್ಮಿನ್ ಯಾರು? ಒಪ್ಪಿಗೆ ಇಲ್ಲದೆ ವಿಡಿಯೋ ಕಳಿಸುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ, ನನಗೆ ಮೊಬೈಲ್ ಆಪರೇಟ್ ಮಾಡಲು ಬರುವುದಿಲ್ಲ ಎಂದರು. ಸ್ಥಳಕ್ಕೆ ಪಂಚಾಯತ್ ಸಿಇಒ ಬರಬೇಕು ಇಲ್ಲವಾದರೆ ಪಂಚಾಯತ್‌ಗೆ ಬೀಗ ಹಾಕುವುದಾಗಿ ಬೆದರಿಕೆ ಹಾಕಿ ಧರಣಿ ಕೂತರು. ವಾಟ್ಸ್ಯಾಪ್‌ನಲ್ಲಿ ಪಂಚಾಯತ್ ವಿರುದ್ಧ ಬರೆದಿದ್ದಕ್ಕಾಗಿ ಇಂಟರ್ ನೆಟ್ ಕೇಬಲ್ ಕತ್ತರಿಸಿ ಊರಿಗೆ ತೊಂದರೆಗಳನ್ನು ಕೊಡಲಾಗಿದೆ ಎಂದು ಆರೋಪಿಸಿದರು.
ಪಂಚಾಯತ್ ಉಪಾಧ್ಯಕ್ಷ ಮಾಧವ್ ಚಾಂತಲ ಮತ್ತು ಗುಮಾಸ್ತ ಸಂತೋಷ್ ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದರು. ಅವರಿಗೆ ಪಂಚಾಯತ್ ಅಧ್ಯಕ್ಷೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ. ಇದೇ ವೇಳೆ ಪಂಚಾಯತ್ ನಿಂದ ಗ್ರಾಮಸ್ಥರಿಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಇಬ್ಬರು ಸದಸ್ಯರು ರಾಜೀನಾಮೆ ನೀಡಿದರು.
ಪಂಚಾಯತ್ ನಲ್ಲಿ ಅವ್ಯವಹಾರ ಆದರೆ ಅದಕ್ಕೆ ಅಧ್ಯಕ್ಷರು ಹಾಗೂ ಪಿಡಿಓ ಜವಾಬ್ದಾರಿ ಆಗುತ್ತಾರೆ. ಹಾಗಾಗಿ ದೂರು ನೀಡುವಂತೆ ಒತ್ತಡ ಹೇರಿದರು. ಗ್ರಾಮಸ್ಥರ ಒತ್ತಾಯ ಕ್ಕೆ ಮಣಿದ ಪಿಡಿಓ ಗ್ರಾಮಸ್ಥರ ಮುಂದೆಯೇ ದೂರು ಬರೆದು ಅದನ್ನು ಗ್ರಾಮಸ್ಥರು ಓದಿ ಸರಿಪಡಿಸಿದರು.
ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಗ್ರಾಮಸ್ಥರು ಹಾಗೂ ಪಿಡಿಓ ವಾಪಸ್ ಬರುತ್ತಿದ್ದಾಗ ಪಂಚಾಯತ್ ಸಿಇಒ ಬಂದಿದ್ದು ಅವರನ್ನು ನಡುರಸ್ತೆಯಲ್ಲೇ ತಡೆದರು. ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಆರೋಪ ಬಂದಾಗ ಕಾನೂನು ಪ್ರಕಾರ ನಡೆದುಕೊಳ್ಳಬೇಕು, ಗ್ರಾಮಸ್ಥರು ಬೀದಿಗೆ ಬರುವಂತೆ ಮಾಡಬಾರದು ಎಂದರು. ಅಲ್ಲದೆ ಪ್ರಕರಣದ ಬಗ್ಗೆ ತನಿಖೆ ನಡೆಸುವ ಬಗ್ಗೆಯೂ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಗ್ರಾಮಸ್ಥರಾದ ಉದಯ ಶಿವಾಲ ಸುಧಾಮಣಿ, ಹರಿಪ್ರಸಾದ್, ಗಿರೀಶ ತಂಬಿನಡ್ಕ,ಸತೀಶ ಚಾಳೆಪ್ಪಾಡಿ, ದಿನೇಶ ಮಡ್ತಿಲ, ಶೇಖರ ಅಂಬೆಕಲ್ಲು, ಸತೀಶ್ ಟಿ.ಎನ್, ಮಣಿಕಂಠ ಕೊಳಗೆ, ಸಚಿತ್ ಶಿವಾಲ, ನಂದ ಬಿಳಿಮಲೆ, ವೀಣಾನಂದ ಬಿಳಿಮಲೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.