
Puttur: ಸೆ. 27ರಂದು ಫುಡ್ ಫೆಸ್ಟ್, ಸೆ. 28ರಂದು ಪುತ್ತೂರುದ ಪಿಲಿಗೊಬ್ಬು
ಪುತ್ತೂರಿನ ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಸೆ.28ರಂದು ಪುತ್ತೂರುದ ಪಿಲಿಗೊಬ್ಬು ಸೀಸನ್ -3 ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಸೆ.27ರಂದು ಫುಡ್ ಫೆಸ್ಟ್ ಗೆ ಚಾಲನೆ ನೀಡಲಾಗುವುದು ಎಂದು ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಹಾಗೂ ಪುತ್ತೂರು ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದ್ದಾರೆ.
ಸೆ.27ರಂದು ಸಂಜೆ 4 ಗಂಟೆಗೆ ಫುಡ್ ಫೆಸ್ಟ್ ಗೆ ಮುಳಿಯ ಜ್ಯುವೆಲ್ಲರ್ಸ್ನ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಅವರು ಚಾಲನೆ ನೀಡಲಿದ್ದಾರೆ. ಭಟ್ ಆಂಡ್ ಭಟ್ ಯುಟ್ಯೂಬ್‌ನ ಸುದರ್ಶನ್ ಭಟ್ ಬೆದ್ರಾಡಿ ಅವರು ಆಹಾರ ಮಳಿಗೆಗೆ ಚಾಲನೆ ನೀಡಲಿದ್ದಾರೆ. ಸೆ.28ರಂದು ಬೆಳಿಗ್ಗೆ 10.30ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಪಾದಂಗಳ ಅವರು ದೀಪ ಪ್ರಜ್ವಲನ ಮಾಡಿ ಆಶೀರ್ವಚನ ನೀಡಲಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ಆಡಳಿತ ನಿರ್ದೇಶಕ ಜಿ.ಎಲ್.ಬಲರಾಮ ಆಚಾರ್ಯ ಪಿಲಿಗೊಬ್ಬು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಿಲಿಗೊಬ್ಬು ವೇದಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಉದ್ಘಾಟಿಸಲಿದ್ದಾರೆ ಹೇಳಿದರು.
ವಿಶಿಷ್ಟ ಬಗೆಯ ತಿಂಡಿ ತಿನಿಸುಗಳು, ಖಾದ್ಯಗಳನ್ನು ಪುತ್ತೂರಿನ ಜನತೆಗೆ ಪರಿಚಯಿಸುವುದು ಫುಡ್ ಫೆಸ್ಟ್ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು, ಇದಕ್ಕಾಗಿ ಪಗೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್‌ವಿಚ್, ವಿವಿಧ ಬಗೆಯ ದೋಸೆಗಳು, ವಿವಿಧ ಬಗೆಯ ಐಸ್‌ಕ್ರೀಮ್‌ಗಳು, ಮೋಕ್ ಟೈಲ್ ಜ್ಯೂಸ್, ಮಟ್ಕಾ ಸೋಡಾ, ಕರಾವಳಿಯ ರುಚಿಕರ ಖಾದ್ಯಗಳ ಸಹಿತ 45ಕ್ಕೂ ವಿವಿಧ ಖಾದ್ಯಗಳ ಮಳಿಗೆಗಳು ವಿಜೃಂಭಿಸಲಿದೆ ಎಂದು ಸಹಜ್ ರೈ ಬಳಜ್ಜ ಹೇಳಿದರು.
ಪುತ್ತೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 8 ಹುಲಿವೇಷ ತಂಡಗಳನ್ನು ಆಹ್ವಾನಿಸಿ ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನ ರೂ 3 ಲಕ್ಷ ದ್ವಿತೀಯ ಬಹುಮಾನ 2 ಲಕ್ಷ, ಹಾಗೂ ತೃತೀಯ ಬಹುಮಾನ 1 ಲಕ್ಷ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಗುವುದು ಮಾತ್ರವಲ್ಲದೆ ಭಾಗಿಯಾದ ತಂಡಗಳಿಗೆ ತಲಾ 50,000 ಗೌರವ ಸಂಭಾವನೆಯನ್ನು ನೀಡಿ ಗೌರವಿಸಲಾಗುವುದು. ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಗುಂಪು ಪ್ರಶಸ್ತಿ ವಿಭಾಗ ದಲ್ಲಿ ಉತ್ತಮ ತಾಸೆ, ಉತ್ತಮ ಬಣ್ಣ, ಉತ್ತಮ ಧರಣಿ ಮಂಡಲ ಕುಣಿತ, ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ ಬಹುಮಾನವಿದೆ. ಪಂದ್ಯಶ್ರೇಷ್ಠದಲ್ಲಿ ಪುತ್ತೂರುದ ಪಿಲಿ ಮತ್ತು ಕಪ್ಪು ಹುಲಿಗೆ ನಗದು ಬಹುಮಾನ ರೂ. 10 ಸಾವಿರ ಮತ್ತು ಎಲ್‌ಇಡಿ ಟಿವಿ ನೀಡಲಾಗುವುದು. ಪ್ರತಿ ತಂಡದಲ್ಲಿ 15 ಹುಲಿವೇಷ ಹಾಗೂ ಪ್ರತಿ ತಂಡಕ್ಕೆ ಹುಲಿ ವೇಷ ಕುಣಿತದ ಕಲಾ ಪ್ರದರ್ಶನ ನೀಡಲು 22 ಪ್ಲಸ್ 1 ನಿಮಿಷದ ಕಾಲಾವಕಾಶವಿರುತ್ತದೆ. ಈ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ ಜಿಲ್ಲೆಯ ಖ್ಯಾತ ತೀರ್ಪುಗಾರರು ಭಾಗವಹಿಸಲಿದ್ದಾರೆ. ಪ್ರತಿ ತಂಡಕ್ಕೂ ರೂ. 50 ಸಾವಿರ ನೀಡಿ ಗೌರವಿಸಲಾಗುವುದು ಎಂದು ಸಹಜ್ ರೈ ಹೇಳಿದರು.