
Mangalore: ಜಿಎಸ್‌ಟಿ ಇಳಿಕೆ ಅಭಿಯಾನ ಬಿಜೆಪಿಯ ನಾಟಕ; ಮಂಜುನಾಥ ಭಂಡಾರಿ ವಾಗ್ದಾಳಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಂಟು ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಅವೈಜ್ಞಾನಿಕ ಜಿಎಸ್‌ಟಿಯನ್ನು ಇದೀಗ ಇಳಿಕೆ ಮಾಡಿರುವ ಬಗ್ಗೆ ಅಭಿಯಾನ ನಡೆಸುತ್ತಿರುವುದು ಬಿಜೆಪಿಯ ಬಿಹಾರ ಚುನಾವಣೆಗಾಗಿನ ಗಿಮಿಕ್ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳ ಅವಧಿಯಲ್ಲಿ ಭಾರೀ ಪ್ರಮಾಣದ ಜಿಎಸ್‌ಟಿ ಮೂಲಕ ದೇಶದ ಶೇ. 70ರಷ್ಟು ಬಡವರಿಂದ ಜಿಎಸ್‌ಟಿ ಹೆಸರಿನಲ್ಲಿ ಕೊಳ್ಳೆ ಹೊಡೆದಿರುವ ಹಣವನ್ನು ಏನು ಮಾಡಲಾಗಿದೆ? ಅವೈಜ್ಞಾನಿಕ ಜಿಎಸ್‌ಟಿ ಜಾರಿಗೆ ಆ ಸಂದರ್ಭ ಸಲಹೆ ನೀಡಿದ್ದು ಯಾರು ಎಂದು ಪ್ರಶ್ನಿಸಿದರು.2017ರಲ್ಲಿ ಜಿಎಸ್‌ಟಿ ಜಾರಿಗೊಳಿಸಿದಾಗ ಇಡೀ ವಿಶ್ವದಲ್ಲಿಯೇ ಇಂತಹ ಜಿಎಸ್‌ಟಿಯನ್ನು ನಾವುಜಾರಿಗೆ ತಂದಿದ್ದು ಎಂದು ಸಂಭ್ರಮಿಸಿದವರು ಇಂದು ಇಳಿಕೆಗೂ ಅಭಿಯಾನ ನಡೆಸುತ್ತಿರುವುದು ನಾಟಕ ಎಂಬುದು ಸ್ಪಷ್ಟವಾಗುತ್ತಿದೆ.
ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಅವಧಿಯಲ್ಲಿ ಸರಳೀಕೃತ ಜಿಎಸ್‌ಟಿ ತರಬೇಕು ಎಂದಾಗ ಅದನ್ನು ಬಿಜೆಪಿ ವಿರೋಧಿಸಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿಯೂ ಬಿಜೆಪಿ ಜಿಎಸ್‌ಟಿಯನ್ನು ಸಂಪೂರ್ಣವಾಗಿ ವಿರೋಧಿಸಿತ್ತು. ಬಳಿಕ 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ಕಾಂಗ್ರೆಸ್ ಇದು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಉದ್ದೇಶಿಸಿದ್ದ ಜಿಎಸ್‌ಟಿ ಅಲ್ಲ. ಇದು ಬಡವರ ಮೇಲಿನ ಪ್ರಹಾರ. ಗಬ್ಬರ್ ಸಿಂಗ್ ಟ್ಯಾಕ್ಸ್ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಳೆದ ಎಂಟು ವರ್ಷಗಳಿಂದ ರಾಷ್ಟ್ರದ ಉದ್ದಗಲದ್ಲಿ ಹೇಳುತ್ತಾ ಬಂದರು. ವಿಶ್ವದ ವಿಶ್ವವಿದ್ಯಾನಿಲಯಗಳಲ್ಲಿ ಇದರ ಬಗ್ಗೆ ವಿಶ್ಲೇಷಿಸಿದಾಗ ಅವರನ್ನು ಭಾರತ ವಿರೋಧಿ ಎನ್ನಲಾಯಿತು. ಆದರೆ ಇದೀಗ ಇಳಿಕೆ ಮಾಡಿ ಸಂಭ್ರಮಿಸುವ ಬಿಜೆಪಿಗೆ ಇದು ನಾಚಿಕೆಗೇಡವಲ್ಲವೇ, ಈ ಬಗ್ಗೆ ಬಿಜೆಪಿಯವರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದವರು ಹೇಳಿದರು.
ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸೇವಾದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಟ್ಯಾಗ್ ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಈ ಸೇವಾದರ ಏರಿಕೆಗೂ ಸರಕಾರಕ್ಕೂ ಯಾವುದೇ ಸಂಬ0ಧವಿಲ್ಲ. ಆಡಳಿತ ಮಂಡಳಿ 14 ವರ್ಷಗಳ ಬಳಿಕ ಹೆಚ್ಚಳ ಮಾಡಿರುವುದಾಗಿ ಹೇಳಿದೆ. ಮತಗಳ್ಳತನದ ಕಾಂಗ್ರೆಸ್ ಅಭಿಯಾನದ ಬಗ್ಗೆಯೂ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗ ಕಾಂಗ್ರೆಸ್‌ನಿAದ ದಾಖಲೆ ಕೇಳುತ್ತದೆ. ಆದರೆ ಬಿಜೆಪಿಯ ಜನಪ್ರತಿನಿಧಿಯೇ ಈ ಬಗ್ಗೆ ಆರೋಪ ಮಾಡಿರುವಾಗ ಅವರಿಂದ ದಾಖಲೆ ಕೇಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ಅಧೀನದಲ್ಲಿರಿಸಿ ಆಡಳಿತ ನಡೆಸುವ ಬಿಜೆಪಿಯ ಕುರಿತಂತೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಅಪ್ರಚಾಚರಗಳ ಬಗ್ಗೆ ಗಮನ ಹರಿಸಬೇಕು. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಹಿಳಾ ಘಟಕದ ನಗರ ವಿಭಾಗದ ಅಧ್ಯಕ್ಷೆ ಅಪ್ಪಿ, ಮುಖಂಡರಾದ ಸುಭಾಷ್ ಕೊಲ್ನಾಡ್, ಶಾಹುಲ್ ಹಮೀದ್, ಸುಹಾನ್ ಆಳ್ವ, ಎಂ.ಎಸ್. ಮುಹಮ್ಮದ್, ನವಾಝ್, ಚಿತ್ತರಂಜನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.