
Chikmagalur: ಅಕ್ರಮ ಆಸ್ತಿ ಸಂಪಾದನೆ ಆರೋಪ; ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್
Thursday, September 25, 2025
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಪತ್ನಿ ಪುಷ್ಪಾ ಮತ್ತು ಪುತ್ರ ಅರ್ಪಿತ್ ರಾಜ್ ದೇವ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಹಾಸನ, ಚಿಕ್ಕಮಗಳೂರು ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಶಾಸಕ ರಾಜೇಗೌಡ ಅವರು 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದಾಗ ತಮ್ಮ ಆದಾಯವನ್ನು 34 ಲಕ್ಷ ರೂ. ಎಂದು ಘೋಷಿಸಿದ್ದರು. ಆದರೆ, 2023ರ ವೇಳೆಗೆ ಅದನ್ನು 44 ಲಕ್ಷ ರೂ. ಎಂದು ತೋರಿಸಿದ್ದರು. ಇದೇ ವೇಳೆ, 123 ಕೋಟಿ ರೂ. ಬ್ಯಾಂಕ್ ಸಾಲವಿದ್ದ ಸಂದರ್ಭದಲ್ಲಿ 266 ಎಕರೆ ಕಾಫಿ ತೋಟವನ್ನು ಖರೀದಿಸಿದ ಆರೋಪ ಕೇಳಿಬಂದಿದೆ.
ಈ ಖರೀದಿಯ ವಿವರವನ್ನು ಚುನಾವಣಾ ಇಲಾಖೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ ಎಂಬ ದೂರು ದಾಖಲಾಗಿದೆ. ಕಾಫಿ ತೋಟವನ್ನು ಪತ್ನಿ, ಪುತ್ರ ಮತ್ತು ಸಹೋದರರ ಹೆಸರಿನಲ್ಲಿ ಖರೀದಿಸಲಾಗಿದ್ದು, ತೋಟದ ಶೇ.33ರಷ್ಟು ಹಂಚಿಕೆಯನ್ನು ಮೂವರ ಹೆಸರಿನಲ್ಲಿ ಮಾಡಲಾಗಿದೆ.
ದಿನೇಶ್ ಹೊಸೂರು ಅವರು ನೀಡಿದ ದೂರಿನ ಆಧಾರದಲ್ಲಿ ನ್ಯಾಯಾಲಯ ತನಿಖೆಗೆ ಆದೇಶ ನೀಡಿದ್ದು, 60 ದಿನಗಳೊಳಗೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಲಾಗಿದೆ.