
Dubai: ಭಾರತದ ಮಡಿಲಿಗೆ ಏಷ್ಯಾ ಕಪ್
ದುಬೈನಲ್ಲಿ ನಿನ್ನೆ ರಾತ್ರಿ ನಡೆದ ರೋಮಾಂಚನಕಾರಿ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ಥಾನ ವಿರುದ್ಧ 5 ವಿಕೆಟ್ ಗಳ ಜಯ ಸಾಧಿಸಿದೆ.
ಭಾರತಕ್ಕೆ ಗೆಲ್ಲಲು ಕೊನೆಯ 6 ಬಾಲ್ ಗಳಲ್ಲಿ 10 ರನ್‌ಗಳು ಬೇಕಾಗಿದ್ದವು. ಹರಿಸ್ ರೌಫ್ ಎಸೆದ ಮೊದಲ ಎಸೆತದಲ್ಲಿ ತಿಲಕ್ ವರ್ಮಾ ಎರಡು ರನ್ ತೆಗೆದರೆ ಮುಂದಿನ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ 1 ರನ್ ತೆಗೆದರೆ ಕೊನೆಯಲ್ಲಿ ರಿಂಕು ಸಿಂಗ್ ಬೌಂಡರಿ ಬಾರಿಸಿ ವಿಜಯದ ನಗು ಬೀರಿದರು.
ಮೊದಲು ಟಾಸ್ ಗೆದ್ದ ಭಾರತ ತಂಡದ ಕಪ್ತಾನ ಸೂರ್ಯ ಕುಮಾರ್ ಯಾದವ್ ಫೀಲ್ಡಿಂಗ್ ಆಯ್ಕೆ ಮಾಡಿದರು.
ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಅಮೋಘ ಜತೆಯಾಟವಾಡಿದರು. 10ನೇ ಓವರ್ ನಲ್ಲಿ ವರುಣ್ ಚಕ್ರವರ್ತಿ ಅವರು 57 (38 ಎಸೆತ)ರನ್ ಗಳಿಸಿದ್ದ ಫರ್ಹಾನ್ ಅವರ ವಿಕೆಟ್ ಪಡೆದರು. ಆ ಬಳಿಕ ಸೈಮ್ ಅಯೂಬ್ ವಿಕೆಟ್ ಪತನವ್ಯಿತು. ಫಖರ್ ಜಮಾನ್ ಭರ್ಜರಿ 46 ರನ್ ಕೊಡುಗೆ ನೀಡಿ ಔಟಾದರು. ಬಳಿಕ ಭಾರತದ ಬೌಲರ್ ಗಳು ಮೇಲುಗೈ ಸಾಧಿಸಿ 146 ಕ್ಕೆ ಆಲೌಟ್ ಮಾಡಿದರು. ಕುಲದೀಪ್ ಯಾದವ್ 4 ವಿಕೆಟ್ ಗಳಿಸಿದರು. ಅಕ್ಷರ್, ಬುಮ್ರಾ ಮತ್ತು ವರುಣ್ ತಲಾ 2 ವಿಕೆಟ್ ಕಿತ್ತರು.
ರನ್ ಬೆನ್ನಟ್ಟುವ ವೇಳೆ ಭಾರತ ತಂಡ 20 ರನ್ ಆಗುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ತಿಲಕ್ ವರ್ಮಾ ಕೊನೆಯವರೆಗೂ ನಿಂತರು. 53 ಎಸೆತಗಳಲ್ಲಿ 69 ರನ್ ಕೊಡುಗೆ ನೀಡಿದರು. ಸಂಜು ಸ್ಯಾಮ್ಸನ್ 24 ಮತ್ತು ಶಿವಂ ದುಬೆ ಅವರ 33 ರನ್ ಗೆಲುವಿಗೆ ಸಹಕಾರಿಯಾಯಿತು.