
Kollur: ಚಿನ್ನದ ಸರ ಕಳವು ಪ್ರಕರಣ; ಆರೋಪಿ ಮಹಿಳೆಯ ಬಂಧನ
Monday, September 29, 2025
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಚಿನ್ನದ ಸರ ಕಳವು ಪ್ರಕರಣವನ್ನು ಕೊಲ್ಲೂರು ಪೊಲೀಸರು 24 ಗಂಟೆಗಳ ಒಳಗಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಣೇಶ ನಗರದ ಯಾಧವ ದುರ್ಗಮ್ಮ ಎಂದು ಗುರುತಿಸಲಾಗಿದೆ. ಆಕೆಯಿಂದ ಕಳವುಗೈದ 2.5 ಲಕ್ಷ ರೂ. ಮೌಲ್ಯದ ಹವಳದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಸೆ.26ರಂದು ರಾತ್ರಿ 9ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ದೇವಿಪ್ರಿಯಾ ಎಂಬವರ ಬ್ಯಾಗ್‌ನಲ್ಲಿದ್ದ 2.5ಲಕ್ಷ ರೂ. ಮೌಲ್ಯದ 3 ಪವನ್‌ನ ಹವಳದ ಚಿನ್ನದ ಸರ ಕಳವಾಗಿತ್ತು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ನೇತೃತ್ವದ ತಂಡ, ಸಿಸಿಟಿವಿ ಕ್ಯಾಮೆರಾ ಮತ್ತು ತಾಂತ್ರಿಕ ಸಹಾಯದಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಕೊಲ್ಲೂರು ಪೊಲೀಸ್ ಉಪನಿರೀಕ್ಷಕಿ ಸುಧಾರಾಣಿ ಟಿ. ಹಾಗೂ ಸಿಬ್ಬಂದಿ ರಾಮ ಪೂಜಾರಿ, ನಾಗೇಂದ್ರ, ಸುರೇಶ್, ನರಸಿಂಹ, ರಾಘವೇಂದ್ರ, ವಾಸಂತಿ ಹಾಗೂ ಸಂತೋಷ ಪಾಲ್ಗೊಂಡಿದ್ದರು.