
Malpe: ಬೀಚ್ ಕ್ರೀಡೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ : ಸ್ವರೂಪ ಟಿ.ಕೆ.
Sunday, September 28, 2025
ಉಡುಪಿ ಜಿಲ್ಲೆಯು ದೇಗುಲ ಪ್ರವಾಸೋದ್ಯಮದಲ್ಲಿ ಈಗಾಗಲೇ ಮುಂಚೂಣಿಯಲ್ಲಿದೆ. ಇದರ ಜೊತೆಗೆ ಜಿಲ್ಲೆಗೆ ದೈವದತ್ತವಾಗಿ ದೊರೆತಿರುವ ಬೀಚ್ ಗಳನ್ನು ವಿಶ್ವ ಮಟ್ಟದಲ್ಲಿ ಪ್ರದರ್ಶಿಸುವ ನಿಟ್ಟಿನಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಹಾಗೂ ಕ್ರೀಡಾಕೂಟಗಳನ್ನು ಹಮ್ಮಿಕೊಂಡು ವಿಶ್ವಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದರು.
ಅವರು ಮಲ್ಪೆ ಬೀಚ್ ನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಅಥ್ಲೆಟಿಕ್ ಅಸೋಸೊಯೇಶನ್ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಸಂದೇಶದೊಂದಿಗೆ ಹಮ್ಮಿಕೊಳ್ಳಲಾದ ಬೀಚ್ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದರು.
ಉಡುಪಿ ಜಿಲ್ಲೆಯು ಬೀಚ್ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವನ್ನು ಹೊಂದಿರುವ ತಾಣವಾಗಿದೆ. ಬೀಚ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೀಚ್ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಬರುವ ಬೀಚ್ ಗಳಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಅವಕಾಶವಿದ್ದು, ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಲಕ್ರೀಡೆ ಮತ್ತು ವಾಯು ಕ್ರೀಡೆಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೀಚ್ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ದೊರಕಿಸುವಲ್ಲಿ ಸಹಕರಿಸಬೇಕು. ಸ್ವಚ್ಚತಾ ಸಪ್ತಾಹದ ಅಂಗವಾಗಿ ಈಗಾಗಲೇ ಎಂಟು ಬೀಚ್ ಗಳಲ್ಲಿ ಸ್ವಚ್ಚತಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಬೀಚ್ ಗಳ ಸ್ವಚ್ಚತೆ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಇಲ್ಲಿನ ಹಲವಾರು ಪ್ರವಾಸಿ ತಾಣಗಳು ಇನ್ನೂ ಪ್ರವಾಸಿಗರ ಕಣ್ಣಿಗೆ ಬಿದ್ದಿಲ್ಲ. ಇಂತಹ ಪ್ರವಾಸಿ ತಾಣಗಳನ್ನು ಗುರುತಿಸುವ ಮತ್ತು ಅವುಗಳನ್ನು ಹಂತ ಹಂತವಾಗಿ ಅಭಿವೃದ್ದಿ ಪಡಿಸಿ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಇದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಪ್ರವಾಸಿ ತಾಣಗಳಿಗೆ ಪ್ರಚಾರ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಾದವ್, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಜಿಲ್ಲಾ ಗ್ಯಾಂರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಉದ್ಯಮಿ ಪ್ರತಿಭಾ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.