
Mangalore: ಚಿನ್ನದ ಗಟ್ಟಿ ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮ0ಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ಚಿನ್ನದ ಗಟ್ಟಿ ದರೋಡೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉಳ್ಳಾಲ ನಿವಾಸಿಗಳಾದ ಫಾರಿಶ್ (18), ಸಫ್ವಾನ್ (23), ಅರಾಫತ್ ಅಲಿ (18), ಫರಾಝ್ (19) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 26ರಂದು ರಾತ್ರಿ ನಡೆದಿದ್ದ ಈ ಘಟನೆಯಲ್ಲಿ ಚಾಯ್ಸ್ ಗೋಲ್ಡ್ ಆಭರಣ ಅಂಗಡಿಯ ಕೆಲಸಗಾರನೊಬ್ಬನ ಮೇಲೆ ಹಲ್ಲೆ ನಡೆಸಿ ಚಿನ್ನದ ಗಟ್ಟಿಯನ್ನು ಕಸಿದುಕೊಂಡಿದ್ದರು. ಅಂಗಡಿಯ ಕೆಲಸಗಾರ ಮುಸ್ತಾಫ ಅವರು ಸ್ಕೂಟರ್‌ನಲ್ಲಿ ಚಿನ್ನದ ಗಟ್ಟಿಯನ್ನು ಸಾಗಾಟ ಮಾಡುತ್ತಿದ್ದ ವೇಳೆ ರಾತ್ರಿ ಸುಮಾರು 8.45ಕ್ಕೆ ಕಾರ್‌ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರು ಆರೋಪಿಗಳು ದಾಳಿ ನಡೆಸಿದ್ದರು. ಮೊದಲು ಇಬ್ಬರು ಆರೋಪಿಗಳು ಸ್ಕೂಟರ್ ಅಡ್ಡಗಟ್ಟಿ ನಿಲ್ಲಿಸಿ, ನಂತರ ಕಾರಿನಲ್ಲಿ ಬಂದ ಇತರರು ಮುಸ್ತಾಫ ಅವರನ್ನು ಬಲವಂತವಾಗಿ ಕಾರಿನೊಳಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು. ಮಂಗಳೂರು ಎಕ್ಕೂರು ಪ್ರದೇಶದಲ್ಲಿ ಇಳಿಸಿ ಚಿನ್ನದ ಗಟ್ಟಿಯನ್ನು ದೋಚಿ ಪರಾರಿಯಾಗಿದ್ದರು. ಈ ಸಂಬ0ಧ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ವೇಳೆ ದರೋಡೆ ಪೂರ್ವಯೋಜಿತ ಸಂಚು ಎಂಬುದು ಬಹಿರಂಗವಾಗಿದೆ.
ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನೂ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈ ಬಾಲಕ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದು, ಮುಸ್ತಾಫ ಅವರು ಚಿನ್ನದ ಗಟ್ಟಿಯನ್ನು ಹೊತ್ತೊಯ್ಯುವ ಮಾಹಿತಿಯನ್ನು ಮುಖ್ಯ ಆರೋಪಿ ಫಾರಿಶ್‌ಗೆ ಪೂರೈಸಿದ್ದಾನೆ. ಆ ಮಾಹಿತಿ ಆಧರಿಸಿ ಆರೋಪಿಗಳು ಸಂಚು ರೂಪಿಸಿ ದರೋಡೆ ನಡೆಸಿದ್ದಾರೆ. ಪ್ರಕರಣದಲ್ಲಿ ಬಳಸಿದ ಸುಜುಕಿ ಆಕ್ಸೆಸ್ ಸ್ಕೂಟರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.