
Udupi: ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಆರೋಪಿಗಳಿಗೆ ಅ.4ರವರೆಗೆ ಪೊಲೀಸ್ ಕಸ್ಟಡಿ
Monday, September 29, 2025
ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣದ ಆರೋಪಿಗಳನ್ನು ಅಕ್ಟೋಬರ್ 4ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಬಂಧಿತ ಆರೋಪಿಗಳಾದ ಮಿಷನ್ ಕಂಪೌ0ಡ್ ನಿವಾಸಿ ಮಹಮ್ಮದ್ ಫೈಝಲ್ ಖಾನ್, ಕರಂಬಳ್ಳಿ ಕುಂಜಿಬೆಟ್ಟು ನಿವಾಸಿ ಮಹಮ್ಮದ್ ಶರೀಫ್ ಹಾಗೂ ಕಾಟಿಪಳ್ಳ ನಿವಾಸಿ ಅಬ್ದುಲ್ ಶುಕೂರ್‌ನನ್ನು ಸೆ. 29ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೊಲೆ ಪ್ರಕರಣದಲ್ಲಿ ಮುಂಬೈ ಉದ್ಯಮಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯತೆ ಇದೆ, ಹೀಗಾಗಿ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳನ್ನು ಅ. 4ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಸೆ. 27ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಮನೆಯಲ್ಲಿ ಸೈಫುದ್ದೀನ್‌ನನ್ನು ಕೊಲೆ ಮಾಡಲಾಗಿತ್ತು. ಪ್ರಕರಣದ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.