
Niddodi: PWDಯಿಂದ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣ; ರಸ್ತೆ ಅಗೆದ ಮಾಲಿಕರು, ವಾಹನ ಸಂಚಾರ ಬಂದ್
Wednesday, September 24, 2025
ನಿಡ್ಡೋಡಿಯ ಮಂಜನಕಟ್ಟೆಯಲ್ಲಿ ಖಾಸಗಿ ಜಮೀನಿನಲ್ಲಿ ಸಾರ್ವಜನಿಕ ರಸ್ತೆ ನಿರ್ಮಿಸಿರುವ ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಜಮೀನು ಮಾಲಕರು ರಸ್ತೆ ಅಗೆದಿರುವ ಘಟನೆ ಸೆ. 24ರಂದು ನಡೆದಿದೆ.
ನಿಡ್ಡೋಡಿ ಮಂಜನಕಟ್ಟೆ ನಿವಾಸಿ ಸಿಸಿಲಿಯಾ ಅವರು ವಿದೇಶದಲ್ಲಿದ್ದ ಸಂದರ್ಭ, ಅವರ ಖಾಸಗಿ ಜಮೀನಿನಲ್ಲಿ ಯಾವುದೇ ಮಾಹಿತಿ ನೀಡದೆ ಪಿಡಬ್ಲ್ಯೂಡಿ ಇಲಾಖೆ 2008ರಲ್ಲಿ ರಸ್ತೆ ನಿರ್ಮಾಣ ಮಾಡಿದೆ ಎನ್ನಲಾಗಿದೆ.ಪಿಡಬ್ಲ್ಯೂಡಿ ಇಲಾಖೆಯ ಅಕ್ರಮ ಪ್ರವೇಶದ ಕುರಿತು ಸಿಸಿಲಿಯಾ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ವಾದ- ವಿವಾದ ಆಲಿಸಿದ್ದ ನ್ಯಾಯಾಲಯ ಸಿಸಿಲಿಯಾ ಅವರ ನಿವೇಶನಕ್ಕೆ ಸಮವಾಗಿರುವ ನಿವೇಶನ ನೀಡಬೇಕು ಅಥವಾ ರಸ್ತೆ ತೆರವು ಮಾಡಿ ನಿವೇಶನ ನೀಡಬೇಕೆಂದು 2017ರಲ್ಲೇ ತೀರ್ಪು ನೀಡಿತ್ತು.
ಆದರೆ, ನ್ಯಾಯಾಲಯದ ತೀರ್ಪು ಉಲ್ಲಂಘಿಸುತ್ತಲೇ ಬಂದಿದ್ದ ಪಿಡಬ್ಲ್ಯೂಡಿ ಇಲಾಖೆ, ತಹಶೀಲ್ದಾರ್ ಮುಂತಾದವರಿದ್ದ ಪ್ರಕರಣದ ಎದುರು ಕಕ್ಷಿಗಳು ಈ ವರೆಗೂ ಯಾವುದೇ ಬದಲಿ ವ್ಯವಸ್ಥೆಯಾಗಲೀ ಅಥವಾ ನಿರ್ಮಾಣಗೊಂಡಿರುವ ರಸ್ತೆಯನ್ನು ತೆರವು ಮಾಡಿ ಸಿಸಿಲಿಯಾ ಅವರಿಗೆ ನೀಡುವ ಗೋಜಿಗೇ ಹೋಗಿಲ್ಲ. ಹಾಗಾಗಿ ಸಿಸಿಲಿಯಾ ಅವರು ನ್ಯಾಯಾಲಯದ ಆದೇಶದಂತೆ ನ್ಯಾಯಾಲಯದ ಸಿಬ್ಬಂದಿಯ ಸಮ್ಮುಖದಲ್ಲೇ ತಮ್ಮ ನಿವೇಶನದ ಗಡಿ ಗುರುತಿಸಿ ರಸ್ತೆ ಅಗೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಘಟನೆಯಿಂದ ಕಿನ್ನಿಗೋಳಿ, ಮೂಡುಬಿದಿರೆ- ಕೈಕಂಬ, ಮಂಗಳೂರು ಸಂಚರಿಸುವ ವಾಹನಗಳು, ಬಸ್ ಗಳು, ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಯಿತು. ಸ್ಥಳದಲ್ಲಿ ಬಜ್ಪೆ ಪೊಲೀಸರು ಭದ್ರತೆ ಕೈಗೊಂಡಿದ್ದರು.