
Vitla: ಸಿಮೆಂಟ್ ಇಂಟರ್ ಲಾಕ್ ಘಟಕಕ್ಕೆ ನುಗ್ಗಿ ದಾಂಧಲೆ; ಅಪ್ರಾಪ್ತರಿಬ್ಬರು ವಶಕ್ಕೆ
Tuesday, September 30, 2025
ಸಿಮೆಂಟ್ ಇಂಟರ್ ಲಾಕ್ ಘಟಕಕ್ಕೆ ನುಗ್ಗಿ ಘಟಕದಲ್ಲಿ ಸಿಸಿಟಿವಿ ಹಾಗೂ ಡಿವಿಆರ್ ಗೆ ಹಾನಿ ಮಾಡಿದ ಘಟನೆ ಪುಣಚ ಗ್ರಾಮದ ಪಾಲಸ್ತಡ್ಕ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಪಾಲಸ್ತಡ್ದಲ್ಲಿ ಸಿಮೆಂಟ್ ಇಂಟರ್ ಲಾಕ್ ಘಟಕಕ್ಕೆ ನುಗ್ಗಿದ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸಿಸಿ ಕ್ಯಾಮರಾದಲ್ಲಿ ಎರಡು ಬಾಲಕರು ಘಟಕದ ಒಳಗಡೆ ಬರುತ್ತಿರುವ ವಿಡಿಯೋ ಇದ್ದು, ಬಳಿಕ ಡಿವಿಆರ್ ಅನ್ನೂ ಸೇರಿಸಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 135/2025, ಕಲಂ 329(3), 326, 299 ಬಿ.ಎನ್.ಎಸ್ 2023ರಂತೆ ಪ್ರಕರಣ ದಾಖಲಾಗಿದೆ.ಡಿವಿಆರ್ ಸುಟ್ಟುಹೋಗಿದ್ದರೂ ಮಾಲೀಕರ ಮೊಬೈಲ್‌ಗೆ ಸಿಸಿ ಕ್ಯಾಮರಾ ಸಂಪರ್ಕವಿರುವುದರಿಂದ ಕೃತ್ಯ ಎಸಗಿದ ಇಬ್ಬರು ಅಪ್ರಾಪ್ತ ಬಾಲಕರು ಪತ್ತೆಯಾಗಿದ್ದಾರೆ.
ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿದಾಗ ಅವರು ತಪ್ಪು ಒಪ್ಪಿಕೊಂಡಿದ್ದು, ಅವರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಘಟಕದಲ್ಲಿರುವ ದೇವರ ಫೋಟೋ ಸುಟ್ಟು ಹಾಕಿರುವುದಕ್ಕೆ ಹಿಂದೂ ಸಂಘಟನೆಗಳ ಮುಖಂಡರು, ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳನ್ನು ಮುಂದೆ ಬಿಟ್ಟು ದಾಂಧಲೆ ನಡೆಸಲಾಗಿದೆ. ಮಕ್ಕಳಿಗೆ ಸಿಸಿ ಕ್ಯಾಮಾರಾದ ಡಿವಿಆರ್ ಸುಟ್ಟು ಹಾಕಬೇಕು ಎನ್ನುವ ಜ್ಞಾನ ಇರಲು ಸಾಧ್ಯವಿಲ್ಲ, ಅಲ್ಲದೆ ಘಟಕದ ಬೀಗ ಒಡೆಯಲೂ ಬಾಲಕರಿಂದ ಅಸಾಧ್ಯ. ಈ ಕೃತ್ಯದ ಹಿಂದೆ ಬೇರೆ ಯಾರದೋ ಕೈವಾಡವಿದೆ. ಪ್ರದೇಶದಲ್ಲಿ ಕೋಮು ಭಾವನೆ ಕೆರಳಿಸುವ ಪ್ರಯತ್ನ ನಡೆದಿದ್ದು, ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.