ಬಿರುಗಾಳಿಗೆ ಕುಸಿದ ಕೋಳಿ ಫಾರಂ ಶೆಡ್: 20 ಲಕ್ಷಕ್ಕೂ ಅಧಿಕ ನಷ್ಟ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗನಾಡು ಗ್ರಾಮದ ಕ್ಯಾರ್ತೂರು ತಳಿಮನೆ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಎಕಿ ಬೀಸಿದ ಬಿರುಗಾಳಿಗೆ ಹರೀಶ ಎಂಬವರಿಗೆ ಸೇರಿದ ಕೋಳಿ ಫಾರಂ ಶೆಡ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಸುಮಾರು 20 ಲಕ್ಷ ಕ್ಕೂ ಅಧಿಕ ನಷ್ಟ ಉಂಟಾಗಿದೆ.
ರಾತ್ರಿ ವೇಳೆ ವೇಗವಾಗಿ ಗಾಳಿ ಬೀಸಿದ ಪರಿಣಾಮ ಶೆಡ್‌ನ ಮೇಲ್ಛಾವಣಿ ಹಾಗೂ ಕಂಬಗಳು ನೆಲಕ್ಕುರುಳಿದ್ದು, ಕೋಳಿ ಸಾಕಾಣಿಕೆ ವ್ಯವಸ್ಥೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ಶೆಡ್ ಒಳಗಿದ್ದ ಸೌಕರ್ಯಗಳು, ವಿದ್ಯುತ್ ವ್ಯವಸ್ಥೆ ಮತ್ತು ಸಾಕಾಣಿಕೆ ಉಪಕರಣಗಳು ನಾಶವಾಗಿದ್ದು, ಭಾರೀ ಆರ್ಥಿಕ ನಷ್ಟವಾಗಿದೆ. ಅದೃಷ್ಟವಶಾತ್ ಘಟನೆ ರಾತ್ರಿ ವೇಳೆ ಸಂಭವಿಸಿದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಾಹಿತಿ ತಿಳಿದ ತಕ್ಷಣ ಬೈಂದೂರು ತಹಶೀಲ್ದಾರ ರಾಮಚಂದ್ರಪ್ಪ, ಪಟ್ಟಣ ಪಂಚಾಯತ್ ಸದಸ್ಯ ಸಂತೋಷ, ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹಾಗೂ ದಲಿತ ಮುಖಂಡ ಶಿವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಹಾನಿಯ ಪ್ರಾಥಮಿಕ ಅಂದಾಜು ಮಾಡಿದ್ದು, ಮುಂದಿನ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಹಾನಿಗೊಳಗಾದ ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದು, ಸಂಬಂಧಿಸಿದ ಇಲಾಖೆಗಳು ತ್ವರಿತವಾಗಿ ನೆರವು ಒದಗಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.


