ಜ.24-26: ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ 'ಸಂಸ್ಕೃತಿ ಉತ್ಸವ -2026'
ಕರಾವಳಿ ಕರ್ನಾಟಕದ ಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯು ಜನವರಿ 24, 25 ಮತ್ತು 26ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ಸಂಸ್ಕೃತಿ ಉತ್ಸವವನ್ನು ಆಯೋಜಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ನಡೆಯಲಿದೆ.
ಮೊದಲ ದಿನ ಸಂಸ್ಕೃತಿ ಉತ್ಸವದಲ್ಲಿ ಜನವರಿ 24 ಶನಿವಾರ ಸಂಜೆ 5:15ಕ್ಕೆ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷರಾದ ಡಾ. ಗಣನಾಥ್ ಎಕ್ಕಾರ್ ಉತ್ಸವವನ್ನು ಉದ್ಘಾಟನೆ ಮಾಡಲಿದ್ದು, ಸಭಾಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಅವರು ವಹಿಸಲಿದ್ದಾರೆ. ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ಪ್ರಾಯೋಜಿತ 'ಶಾರದ ಕೃಷ್ಣ' ಪುರಸ್ಕಾರವನ್ನು ಹಿರಿಯ ರಂಗ ನಿರ್ದೇಶಕರಾದ ಬೆಂಗಳೂರಿನ ಎಸ್.ಎನ್. ಸೇತುರಾಮ್ ಅವರಿಗೆ ನೀಡಲಾಗುವುದು. ಅಭಿನಂದನಾ ಮಾತನ್ನು ವಿಜಯನಾಥ್ ಹೆಗಡೆ ಮಾಡಲಿದ್ದು, ಎನ್. ಸೂರ್ಯನಾರಾಯಣ ಅಡಿಗ ಡಾ. ರಾಜಲಕ್ಷ್ಮಿ ಹಾಗೂ ವಿಘ್ನೇಶ್ವರ ಅಡಿಗ ಅವರು ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ನಂತರ ಅನನ್ಯ ನಾಟಕ ಬೆಂಗಳೂರು ಅಭಿನಯಿಸುವ 'ತಳಿ' ನಾಟಕ ಪ್ರದರ್ಶನಗೊಳ್ಳಲಿದೆ.
ಎರಡನೇ ದಿನ ಜ.25ರಂದು ಸಂಜೆ 5: 15ಕ್ಕೆ ಪಂಚಮಿ ಟ್ರಸ್ಟ್ (ರಿ), ಉಡುಪಿ ಪ್ರಾಯೋಜಿತ ಪುರಸ್ಕಾರವನ್ನು ಕನ್ನಡದ ಹಿರಿಯ ಸಾಹಿತಿ ಹಾಗೂ ಕಿರುತೆರೆ ನಿರ್ದೇಶಕರಾದ ಟಿ. ಎನ್. ಸೀತಾರಾಂ ಅವರಿಗೆ ನೀಡುತ್ತಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ಪ್ರೊ. ಕೆ.ಪಿ. ರಾವ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕರಾದ ಬಿ. ಆರ್. ವೆಂಕಟರಮಣ ಐತಾಳ್ ಹಾಗೂ ಪಂಚಮಿ ಟ್ರಸ್ಟ್ (ರಿ ) ಉಡುಪಿ ಸಂಸ್ಥಾಪಕರಾದ ಡಾ. ಎಂ. ಹರೀಶ್ಚಂದ್ರ ಉಪಸ್ಥಿತರಿರುತ್ತಾರೆ.
ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನ ಮಾತುಗಳನಾಡಲಿದ್ದು, ಸುಗುಣ ಸುವರ್ಣ ಹಾಗೂ ಭುವನಪ್ರಸಾದ್ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ನಂತರ ಯಕ್ಷ ರಂಗಾಯಣ ಕಾರ್ಕಳದ ರೆಪರ್ಟರಿ ಕಲಾವಿದರಿಂದ 'ಗುಲಾಮನ ಸ್ವಾತಂತ್ರ‍್ಯ ಯಾತ್ರೆ' ಪ್ರದರ್ಶನಗೊಳ್ಳಲಿದೆ.
ಮೂರನೇ ದಿನ ಜನವರಿ 26ರಂದು ಸಂಜೆ 5:15ಕ್ಕೆ ಪ್ರಭಾವತಿ ಶೆಣೈ ಶ್ರೀ ಉಡುಪಿ ವಿಶ್ವನಾಥ ಶೆಣೈ ಪ್ರಯೋಜಿತ 'ವಿಶ್ವ ಪ್ರಭಾ' ಪುರಸ್ಕಾರ ವನ್ನು ಶಿಕ್ಷಣ ತಜ್ಞರಾದ ಅಶೋಕ್ ಕಾಮತ್ ಅವರಿಗೆ ನೀಡಲಾಗುವುದು.
ಅಂದು ಸಭಾಧ್ಯಕ್ಷತೆಯನ್ನು ಮಾಜಿ ಸಚಿವರು ಕರ್ನಾಟಕ ಸರ್ಕಾರ ಪ್ರಮೋದ್ ಮಧ್ವರಾಜ್ ವಹಿಸಲಿದ್ದು, ಅಭಿನಂದನ ಮಾತನ್ನು ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ ಮಾಡಲಿದ್ದಾರೆ.
ಸಮಾರಂಭದಲ್ಲಿ ಸಿ. ಎಸ್. ರಾವ್, ಕೃಷ್ಣರಾಜ ತಂತ್ರಿ, ಪ್ರಭಾವತಿ ಶೆಣೈ, ಪ್ರಶಾಂತ್ ಕಾಮತ್ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ನಂತರ ಯಕ್ಷ ರಂಗಾಯಣದ ಕಲಾವಿದರಿಂದ 'ಮಹಾತ್ಮರ ಬರವಿಗಾಗಿ' ನಾಟಕ ಪ್ರದರ್ಶನಗೊಳ್ಳಲಿದೆ.
ಕಲಾಭಿಮಾನಿಗಳಿಗೆ, ಸಾಹಿತ್ಯ ಆಸಕ್ತರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಸಂಸ್ಥೆಯ ಸಂಚಾಲಕ ರವಿರಾಜ್ ಎಚ್.ಪಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.