ಬ್ಯಾಂಕ್ ಉದ್ಯೋಗಿ ನಾಪತ್ತೆ ಪ್ರಕರಣ; ಬ್ಯಾಂಕ್ ಗೆ 71 ಲಕ್ಷ ರೂ. ವಂಚನೆ
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೆರ್ನೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯ ಉಪ ಶಾಖಾ ಪ್ರಬಂಧಕ ಪುಲುಗುಜ್ಜು ಸುಬ್ರಹ್ಮಣ್ಯ(30) ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನಾಪತ್ತೆಯಾಗಿರುವ ಉದ್ಯೋಗಿ ಪುಲುಗುಜ್ಜು ಸುಬ್ರಹ್ಮಣ್ಯ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಬ್ಯಾಂಕಿಗೆ 71.41 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ದಾರೆ.
ಬಿ.ಸಿ.ರೋಡಿನಲ್ಲಿ ವಾಸ್ತವ್ಯ ಹೊಂದಿದ್ದ ಸುಬ್ರಹ್ಮಣ್ಯಂ ಡಿಸೆಂಬರ್ 17ರಂದು ತನ್ನ ತಮ್ಮನಿಗೆ ಹುಷಾರಿಲ್ಲ ಎಂದು ರೂಮಿಗೆ ಹೋಗುತ್ತೇನೆಂದು ಬ್ಯಾಂಕಿನಲ್ಲಿ ಹೇಳಿ ಹೋದವ ಬಳಿಕ ನಾಪತ್ತೆಯಾಗಿದ್ದ. ತನ್ನ ರೂಂನಲ್ಲಿ ಜೊತೆಯಾಗಿ ವಾಸ್ತವ್ಯ ಹೊಂದಿದ್ದ ವಿಷ್ಣುವಿನಲ್ಲಿ ತಾನು ಊರಿಗೆ ಹೋಗುವುದಾಗಿ ತಿಳಿಸಿ ಹೋಗಿದ್ದಾನೆನ್ನಲಾಗಿದೆ. ಆದರೆ ಊರಿಗೂ ಹೋಗದೆ ಎಲ್ಲಿಯೂ ಕಾಣಿಸದೆ ನಾಪತ್ತೆಯಾಗಿರುವುದಾಗಿ ದೂರಲಾಗಿತ್ತು. ಈ ಸಂಬAಧ ಸುಬ್ರಹ್ಮಣ್ಯಂ ಅವರ ಸಹೋದರ ಪುಲುಗುಜ್ಜು ನಾಗ ಫಣೀಂದ್ರ ಅವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು.
ಈ ಮಧ್ಯೆ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿ.ಎಸ್. ಚಂದ್ರಶೇಖರ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ 2023ರ ಸೆಪ್ಟೆಂಬರ್ ತಿಂಗಳ 4ರಿಂದ 2025 ರ ಡಿಸೆಂಬರ್ ತಿಂಗಳ 19 ರವರೆಗೆ ಪೆರ್ನೆ ಶಾಖೆಯಲ್ಲಿ ಉಪ ಶಾಖಾ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದ ಸುಬ್ರಹ್ಮಣ್ಯಂ ಬ್ರಾಂಚಿನ ಎ.ಟಿ.ಎಂ. ನ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. 2024ರ ಫೆಬ್ರವರಿ 6 ರಿಂದ 2025 ರ ಡಿಸೆಂಬರ್ 16ರ ಅವಧಿಯಲ್ಲಿ ಆರೋಪಿಯು ಅದೇ ಬ್ಯಾಂಕಿನ ಎ.ಟಿ.ಎಂ ಮಿಷನ್ ಗೆ ಪ್ರತಿ ದಿನ ನಿಗದಿ ಪಡಿಸಿದ ಹಣವನ್ನು ಜಮಾ ಮಾಡದೇ ಕಡಿಮೆ ನಗದು ಹಣವನ್ನು ಜಮಾ ಮಾಡಿ ಸತತವಾಗಿ ಬ್ಯಾಂಕಿನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದ. ಒಟ್ಟು ರೂ 70,86,000 ರೂ. ಹಣವನ್ನು ವಂಚನೆ ಮಾಡಿದ್ದ, ಸೇಫ್ ಲಾಕರ್ ನ್ನು ಪರಿಶೀಲಿಸಿದಾಗ 4.400 ಗ್ರಾಂ ತೂಕದ ರೂ 55,000 ಅಂದಾಜು ಮೌಲ್ಯದ 1 ಪ್ಯಾಕೆಟ್ ಚಿನ್ನವನ್ನು ಲಪಟಾಯಿಸಿ ವಂಚಿಸಿರುವುದಾಗಿ ಆರೋಪಿಸಲಾಗಿದೆ.
ಆರೋಪಿಯು ದುರುಪಯೋಗ ಪಡಿಸಿದ ಹಣದ ವ್ಯವಹಾರಗಳು ಬೆಳಕಿಗೆ ಬಂದಿರುವುದು ತಿಳಿದು ಬಂದಾಗ ಡಿ. 17ರಂದು ಅಸೌಖ್ಯದ ಕಾರಣ ಹೇಳಿ ಕಚೇರಿಯಿಂದ ನಿರ್ಗಮಿಸಿದ್ದು, ನಾಪತ್ತೆಯಾಗಿದ್ದಾರೆಂದು ದೂರಲಾಗಿದೆ. ಈ ಮೂಲಕ ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ ಒಟ್ಟು ಮೌಲ್ಯ ರೂ 71,41,000 ರೂ. ವಂಚನೆ ಮಾಡಿರುವುದಾಗಿ ದೂರಲಾಗಿದೆ. ದೂರನ್ನು ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.