ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ವತಿಯಿಂದ ಹೊರೆಕಾಣಿಕೆ- ತಂಪು ಪಾನೀಯ ವಿತರಣೆ (video)
ಉಡುಪಿ ಶ್ರೀ ಕೃಷ್ಣಮಠದ ಶಿರೂರು ಪರ್ಯಾಯ ಸಂದರ್ಭದಲ್ಲಿ ಹಿಂದೂ-ಮುಸ್ಲಿಮರ ಸೌಹಾರ್ದತೆ ಹಾಗೂ ಐಕ್ಯತೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ವತಿಯಿಂದ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಹಾಜಿ.ಕೆ ಅಬೂಬಕ್ಕರ್ ಪರ್ಕಳ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಈ ಬಾರಿಯ ಶೀರೂರು ಮಠದ ಪರ್ಯಾಯ ಸಂದರ್ಭದಲ್ಲೂ ಸಮಿತಿ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 9 ರಂದು ನಡೆಯುವ ಪುರಪ್ರವೇಶ ಸಂದರ್ಭದಲ್ಲಿ ಪಾಲ್ಗೊಳ್ಳುವ ಸಾವಿರಾರು ಭಕ್ತರಿಗೆ ಸಮಿತಿ ವತಿಯಿಂದ ತಂಪು ಪಾನೀಯ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ಸಮಿತಿ ವತಿಯಿಂದ ಜನವರಿ 13 ರಂದು ಹೊರೆಕಾಣಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದು ಜೋಡುಕಟ್ಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಹೊರೆಕಾಣಿಕೆ ಮೆರವಣಿಗೆಯಲ್ಲಿ ಮುಸ್ಲಿಮರ ಸಾಂಸ್ಕೃತಿಕ ಕಲೆಗಳಲ್ಲಿ ಒಂದಾದ ದಫ್ ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ಜನವರಿ 18 ರಂದು ನಡೆಯಲಿರುವ ಪರ್ಯಾಯ ದಿನವೂ ಸಮಿತಿ ವತಿಯಿಂದ ಹತ್ತು ಸಾವಿರ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಈ ಮೂರೂ ಕಾರ್ಯಕ್ರಮಗಳಿಗೂ ಮುಸ್ಲಿಂ ಬಾಂಧವರೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿಯ ಹಂಝತ್ , ರಫೀಕ್ ದೊಡ್ಡಣಗುಡ್ಡೆ ,ಪೀರು ಸಾಹೇಬ್ ,ರಿಯಾಝ್ ಪಳ್ಳಿ ,ಚಾರ್ಲ್ಸ್ ಆಂಬ್ಲರ್ , ಆರಿಫ್ ,ಅನ್ಸಾರ್ ಅಹಮದ್ ಮತ್ತು ಪ್ರಚಾರ ಸಮಿತಿಯ ರಹೀಂ ಉಜಿರೆ ಉಪಸ್ಥಿತರಿದ್ದರು.
