ಮಹಿಳೆಯರ ಸುರಕ್ಷತೆ, ಮಕ್ಕಳ ರಕ್ಷಣೆಗೆ ಬೀದಿಗಿಳಿದ "ಅಕ್ಕ ಪಡೆ" (Video)
Saturday, January 03, 2026
ಮಹಿಳೆಯರು ಹಾಗೂ ಮಕ್ಕಳನ್ನು ಇನ್ಮುಂದೆ ಕೆಣಕಿದ್ರೆ ಹುಷಾರ್.. ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆ ಹಾಗೂ ಮಕ್ಕಳ ರಕ್ಷಣೆಗಾಗಿ ಅಕ್ಕ ಪಡೆ ಬೀದಿಗೆ ಇಳಿಯುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಗಾಗಿ ರಾಜ್ಯ ಸರ್ಕಾರವು ಪ್ರಾರಂಭಿಸಿರುವ ಹೊಸ ಭದ್ರತಾ ಪಡೆಯಾದ ಅಕ್ಕ ಪಡೆಗೆ ಉಡುಪಿಯಲ್ಲಿ ಇಂದು ಚಾಲನೆ ನೀಡಲಾಗಿದೆ.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಹಾಗೂ ಉಡುಪಿ ಎಸ್ಪಿ ಹರಿರಾಮ್ ಶಂಕರ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಅವರು, ಮಹಿಳೆಯರ ಸುರಕ್ಷತೆ ಹಾಗೂ ಮಹಿಳಾ ಸಬಲೀಕರಣದ ದಾರಿಯಲ್ಲಿ ಇದೊಂದು ಮಹತ್ವಪೂರ್ಣ ಯೋಜನೆಯಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಇದರಿಂದ ತ್ವರಿತ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಉಡುಪಿ ಎಸ್ಪಿ ಹರಿರಾಮ್ ಶಂಕರ್ ಮಾತನಾಡಿ, ಅಕ್ಕಪಡೆಯಲ್ಲಿ ನಾಲ್ಕು ಮಂದಿ ಮಹಿಳಾ ಹೋಂ ಗಾರ್ಡ್ಸ್ ಹಾಗೂ ಪೊಲೀಸ್ ಸಿಬ್ಬಂದಿ ಚಾಲಕ ಇರಲಿದ್ದಾರೆ. 2020ರಲ್ಲಿ ಉಡುಪಿಯಲ್ಲಿ ಮಹಿಳಾ ಸುರಕ್ಷತೆಗಾಗಿ ಅಸ್ಥಿತ್ವಕ್ಕೆ ಬಂದಿರುವ ಅಬ್ಬಕ್ಕ ಪಡೆಗೆ ತರಬೇತಿ ನೀಡಿರುವ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಕ್ಕಪಡೆಯ ಸಿಬ್ಬಂದಿಗಳಿಗೂ ತರಬೇತಿ ನೀಡಿದ್ದಾರೆ. ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಅಕ್ಕಪಡೆ ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮೊದಲಾದವರು ಉಪಸ್ಥಿತರಿದ್ದರು.
