ಸಾಮಾಜಿಕ ಸೌಹಾರ್ದದ ವಾತಾವರಣ ಅಭಿವೃದ್ಧಿಯ ಬುನಾದಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ದುರ್ಬಲರಿಗೆ ಸಹಾಯ ಹಸ್ತ, ಕೃಷಿಕರಿಗೆ ಸೌಕರ್ಯ, ಉದ್ಯಮಶೀಲರಿಗೆ ಒತ್ತಾಸೆ, ಸಾಮಾಜಿಕ ಸೌಹಾರ್ದದ ವಾತಾವರಣ ಅಭಿವೃದ್ಧಿಯ ಬುನಾದಿ ಎಂಬ ವಿಶ್ವಾಸದೊಂದಿಗೆ ಹತ್ತು ಹಲವು ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸ್ವತಂತ್ರ ಭಾರತವು ತನ್ನ ಸಂವಿಧಾನವನ್ನು ಅನುಷ್ಠಾನಕ್ಕೆ ತಂದು ದೇಶದ ಆಡಳಿತ ಚೌಕಟ್ಟನ್ನು ರೂಪಿಸಿದ ಜನವರಿ 26 ನಮ್ಮೆಲ್ಲರಿಗೂ ಐತಿಹಾಸಿಕ ದಿನವಾಗಿದೆ. ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಮನನ ಮಾಡಿಕೊಳ್ಳಲು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದು ಸುದಿನವಾಗಿದೆ ಎಂದು ಅವರು ಹೇಳಿದರು.
ಉನ್ನತ ಪ್ರಜಾಪ್ರಭುತ್ವದ ಆಶಯದ ನಮ್ಮ ಸಂವಿಧಾನ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ, ವಾಕ್ ಸ್ವಾತಂತ್ರ‍್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಲಿಂಗ, ಭಾಷೆ, ಧರ್ಮ, ಜನಾಂಗ, ಜನ್ಮಸ್ಥಳ ಯಾವುದೇ ಬೇಧ ಭಾವವಿಲ್ಲದೇ ಸಮಾನ ಅವಕಾಶ ನೀಡಲಾಗಿದೆ. ಪ್ರತಿಯೊಬ್ಬ ನಾಗರಿಕರ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ‍್ಯವನ್ನು ಖಾತರಿಪಡಿಸಿದ ನಮ್ಮೆಲ್ಲ ಸ್ವಾತಂತ್ರ‍್ಯ ಹೋರಾಟಗಾರರಿಗೆ ನಾವು ಸದಾ ಋಣಿಗಳು ಎಂದರು.
ನಮ್ಮ ದೇಶದ ಹಿರಿಯರು ಹಾಗೂ ಮಹಾತ್ಮರ ಕಾರ್ಯವನ್ನು ನಾವು ಕೃತಜ್ಞತೆಯಿಂದ ನೆನಪಿಸಿಕೊಳ್ಳೋಣ. ಎಲ್ಲದಕ್ಕಿಂತ ಹೆಚ್ಚಾಗಿ ನಾವು ಇಲ್ಲಿಯವರೆಗೆ ನಡೆಸಿದ ಅಭಿವೃದ್ಧಿ ಕಾರ್ಯ ಹಾಗೂ ಮುಂದೆ ಸಾಗಬೇಕಾದ ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಇದಾಗಿದೆ. ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸುವ ಮೂಲಕ ನಮ್ಮ ದೇಶ ಸ್ವಾತಂತ್ರ‍್ಯ ಪಡೆಯಿತು. ಸ್ವತಂತ್ರ ರಾಷ್ಟ್ರವಾಗಿ ನಾವು ನಮ್ಮೆಲ್ಲಾ ಕಾರ್ಯಗಳಲ್ಲಿ ಅದನ್ನೇ ಅನುಸರಿಸಬೇಕು. ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸಾಮಾಜಿಕ, ಆರ್ಥಿಕ, ಆಡಳಿತ, ರಾಜಕೀಯ ಚಟುವಟಿಕೆಗಳ ಕಾರ್ಯಗಳು ಮುಂದುವರಿಯಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ದೇಶದ ನಾಗರಿಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಇವುಗಳನ್ನು ಉಳಿಸಿ -ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಜಾತಿ, ಭಾಷೆ, ಪಂಗಡ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ಸೃಷ್ಟಿಸಿ, ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡುವುದರೊಂದಿಗೆ ದೃಢ ರಾಷ್ಟ್ರ ನಿರ್ಮಾಣದ ಸಂಕಲ್ಪವನ್ನು ಮಾಡಬೇಕು. ನಮ್ಮ ಸಂಸ್ಕೃತಿಯು ನಮಗೆ ಕಲಿಸುವ ಸಮಗ್ರತೆ, ಪ್ರಾಮಾಣಿಕತೆ, ಉತ್ತಮ ನಡವಳಿಕೆ ಹಾಗೂ ಮೌಲ್ಯಗಳು ಮಹತ್ವವಾದುದು. ನಮ್ಮ ದೇಶದ ಯುವ ಜನರು ಈ ಪರಂಪರೆಯನ್ನು ಮುನ್ನಡೆಸಿಕೊಂಡು, ಮೌಲ್ಯಾಧಾರಿತ ಶಿಕ್ಷಣವನ್ನು ಹೊಂದಿ, ದೇಶದ ಭವಿಷ್ಯದ ಶಿಲ್ಪಿಗಳಾಗಬೇಕು ಎಂದು ಕರೆ ನೀಡಿದರು.
ನಮ್ಮ ಗಡಿಗಳನ್ನು ಕಾಪಾಡುವ ನಮ್ಮ ಸಶಸ್ತ್ರ ಪಡೆಗಳು ಮತ್ತು ಪ್ಯಾರಾ ಮಿಲಿಟರಿ ಪಡೆಗಳ ಸದಸ್ಯರಿಗೆ ಹಾಗೂ ನಮ್ಮ ಆಂತರಿಕ ಭದ್ರತಾ ಪಡೆಗಳಿಗೆ ನನ್ನ ವಿಶೇಷ ಶುಭಾಶಯಗಳನ್ನು ತಿಳಿಸುತ್ತೇನೆ. ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಗೆ ಕೊಡುಗೆ ನೀಡಿದ ಪ್ರತಿಯೊಬ್ಬ ನಾಗರಿಕರನ್ನು ಅಭಿನಂದಿಸುತ್ತೇನೆ ಎಂದರು.
ರಾಜ್ಯಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ದೌರ್ಜನ್ಯ, ನಿರ್ಲಕ್ಷ್ಯತೆ ಅಥವಾ ಶೋಷಣೆಗೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲದಲ್ಲಿ ನೆರವು ಮತ್ತು ರಕ್ಷಣೆ ಒದಗಿಸಿ ಭಯ ಮುಕ್ತ ವಾತಾವರಣ ಸೃಷ್ಟಿಸಲು ರಾಜ್ಯದ ಎಲ್ಲಾ ಜಿಲ್ಲೆ ಹಾಗೂ 5 ಪೊಲೀಸ್ ಆಯುಕ್ತಾಲಯಗಳಲ್ಲಿ ಅಕ್ಕಪಡೆಯನ್ನು ಸ್ಥಾಪಿಸಲಾಗಿದೆ. ಬಡ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷೆಯಿOದ ರಾಜ್ಯದಲ್ಲಿ 4056 ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಪ್ರಸಕ್ತ ವರ್ಷದಿಂದ ಆರಂಭಿಸಲಾಗುತ್ತಿದೆ. ಮಹಿಳೆಯರ ಆರ್ಥಿಕ ಸ್ವಾತಂತ್ರ‍್ಯ ಹೆಚ್ಚಿಸಲು ಗೃಹಲಕ್ಷ್ಮೀ ವಿವಿದ್ದೋದ್ದೇಶ ಸಹಕಾರ ಸಂಘ ಸ್ಥಾಪಿಸಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಕ್ಷೀರಭಾಗ್ಯ ಯೋಜನೆಯ ಜೊತೆಗೆ ವಾರದಲ್ಲಿ ಎರಡು ದಿನ ನೀಡುತ್ತಿದ್ದ ಬೇಯಿಸಿದ ಮೊಟ್ಟೆ ನೀಡುವ ಯೋಜನೆಯನ್ನು ವಾರದಲ್ಲಿ 6 ದಿನ ನೀಡಲಾಗುತ್ತಿದೆ. ಇದನ್ನು 9 ಹಾಗೂ 10 ನೇ ತರಗತಿಗಳಿಗೂ ವಿಸ್ತರಿಸಲಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ನಮ್ಮದು ಮುಂಚೂಣಿ ರಾಜ್ಯವಾಗಿದೆ. ಹೂಡಿಕೆ ಪ್ರಸ್ತಾವನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುತ್ತಿದ್ದು, ಮೊದಲಿಗಿಂತಲೂ ಹೆಚ್ಚು ಕೈಗಾರಿಕಾ ಸ್ನೇಹಿಯಾಗಿದೆ. ಮಾನವ ಮತ್ತು ವನ್ಯಜೀವಿಯ ಸಂಘರ್ಷ ತಡೆಗೆ ಅರಣ್ಯ ಇಲಾಖೆಯಲ್ಲಿ ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ 7 ವಿಭಾಗೀಯ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿ, ಆ ಮೂಲಕ ಅಮಾಯಕ ಜನರ ಜೀವಹಾನಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟವುಂಟು ಮಾಡುತ್ತಿದ್ದು, ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಿಗಳ ಪ್ರತಿಬಂಧಕ ವಿಧೇಯಕವನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆತ್ಮವಿಶ್ವಾಸವನ್ನು, ಆರ್ಥಿಕ ಸ್ವಾತಂತ್ರ‍್ಯವನ್ನು ಹಾಗೂ ಕುಟುಂಬದ ಸ್ಥಿರತೆಯನ್ನು ಹೆಚ್ಚಿಸಿವೆ ಎಂದರು.
ಇದರಿOದ ಕುಟುಂಬದ ಖರೀದಿ ಸಾಮರ್ಥ್ಯ ಹೆಚ್ಚಾಗಿ, ಮಾರುಕಟ್ಟೆಗಳಲ್ಲಿ ಬೇಡಿಕೆ ಏರಿಕೆಯಾಗಿದೆ. ಈವರೆಗೆ ಐದು ಗ್ಯಾರಂಟಿಗಳಿಗೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಇದರಿಂದ ಜಿ.ಎಸ್.ಟಿ ಸಂಗ್ರಹ ಹಾಗೂ ತಲಾ ಆದಾಯ ಕಳೆದ 10 ವರ್ಷಗಳಲ್ಲಿ ಶೇ. 101 ರಷ್ಟು ಹೆಚ್ಚಾಗಿದೆ. ಮಹಿಳಾ ಸಬಲೀಕರಣದ ಪರಿಕಲ್ಪನೆಯೊಂದಿಗೆ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಮಹಿಳೆಯರಲ್ಲಿ ಸ್ವಾಭಿಮಾನವನ್ನು ಬೆಳೆಸುವ ಜೊತೆಗೆ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದಲ್ಲಿ 1.24 ಕೋಟಿಗೂ ಅಧಿಕ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು, ಇದಕ್ಕಾಗಿ 57 ಸಾವಿರ ಕೋಟಿ ರೂಪಾಯಿ ಭರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 2.24 ಲಕ್ಷ ಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗೆ 44.93 ಕೋಟಿ ರೂ. ಜಮಾ ಮಾಡಲಾಗಿದೆ ಎಂದು ವಿವರಿಸಿದರು.
ಶಕ್ತಿ ಯೋಜನೆ ಕಾರಣದಿಂದ ಮಹಿಳೆಯರ ಸಂಚಾರ, ಉದ್ಯೋಗಿಗಳ ಸಂಖ್ಯೆಯಲ್ಲಿ ಸುಧಾರಣೆಯಾಗಿ, ಸಾಮಾಜಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಿದೆ. ಸಮಾಜದ ಎಲ್ಲಾ ವರ್ಗದವರಿಗೂ ಗೃಹಜ್ಯೋತಿ ಯೋಜನೆಯಿಂದ ಆರ್ಥಿಕ ಉಳಿತಾಯವಾಗುತ್ತಿದೆ. ಬಹುತೇಕ ಜನರು ಈ ಹಣವನ್ನು ಕುಟುಂಬ ನಿರ್ವಹಣೆಗೆ ಬಳಸುತ್ತಿದ್ದಾರೆ. ಅನ್ನಭಾಗ್ಯ ಎಂಬುದು ತಾಯಿ ಹೃದಯದ ಯೋಜನೆಯಾಗಿದ್ದು, ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಬಡಜನರಿಗೆ ಎರಡು ಹೊತ್ತು ನೆಮ್ಮದಿಯ ಊಟ ನೀಡುವ, ಆಹಾರದ ಚಿಂತೆಯನ್ನು ದೂರ ಮಾಡಿ, ಸರ್ವರಿಗೂ ಆಹಾರ ಮತ್ತು ಪೌಷ್ಠಿಕತೆಯನ್ನು ಹೆಚ್ಚಿಸುವ ಉದ್ದೇಶವನ್ನು ಸಾಕಾರಗೊಳಿಸಿದೆ ಎಂದರು.
ಬದುಕು ಕಟ್ಟಿಕೊಳ್ಳುವುದಕ್ಕೆ ಅಡಿಪಾಯ ಒದಗಿಸುವ ಯುವನಿಧಿ ಯೋಜನೆಯು ಯುವಕರಿಗೆ ಕನಿಷ್ಠ ಆರ್ಥಿಕ ಭದ್ರತೆಯನ್ನು ನೀಡುವ ಜೊತೆಗೆ ಅವರ ಉದ್ಯೋಗ ಹುಡುಕುವ ಅವಧಿಯಲ್ಲಿ ಗೌರವಯುತ ಜೀವನ ಸಾಗಿಸಲು ಅನುಕೂಲ ಮಾಡಿಕೊಟ್ಟಿದೆ. ರಾಜ್ಯದ ವಿದ್ಯಾರ್ಥಿನಿಯರಿಗಾಗಿ “ದೀಪಿಕಾ” ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನವನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಜಾರಿಗೆ ತಂದಿದೆ. ಸರ್ಕಾರ ಪ್ರತೀ ವರ್ಷ ಪ್ರತೀ ವಿದ್ಯಾರ್ಥಿನಿಗೆ 30 ಸಾವಿರ ರೂ. ದೀಪಿಕಾ ವಿದ್ಯಾರ್ಥಿವೇತನವನ್ನು ನೀಡಲಿದೆ. ಇದು ಉನ್ನತ ಶಿಕ್ಷಣದಲ್ಲಿ ಸಾಧನೆ ಮಾಡಲು ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮೂಲಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಕಳೆದ ಎರಡೂವರೆ ವರ್ಷಗಳಲ್ಲಿ 10,467 ಕಿ.ಮೀ. ರಸ್ತೆಯನ್ನು 16,357 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಜೊತೆಗೆ ನಿರ್ವಹಣೆಯನ್ನು ಮಾಡಲಾಗುತ್ತಿದೆ. ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಸಮೃದ್ದ ನಾಡು ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವ ಉದ್ದೇಶದಿಂದ ನಮ್ಮ ಸರ್ಕಾರವು “ನೀರಿದ್ದರೆ ನಾಳೆ” ಎಂಬ ವಿನೂತನ ಯೋಜನೆಗೆ ಚಾಲನೆ ನೀಡಿದೆ ಎಂದರು.
ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಜಿಲ್ಲೆಯಲ್ಲಿ 90 ಕಿ.ಮೀ. ಕರಾವಳಿ ಪ್ರದೇಶವಿದ್ದರೂ, ಇಲ್ಲಿಯವರೆಗೆ ಅದನ್ನು ಪ್ರವಾಸೋದ್ಯಮಕ್ಕೆ ಸೂಕ್ತವಾಗಿ ಬಳಸಿಕೊಳ್ಳಲಾಗಿಲ್ಲ. ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ನಮ್ಮ ಸರ್ಕಾರ ಆಸಕ್ತಿ ವಹಿಸಿ, ಕಳೆದ ವಾರ ಮಂಗಳೂರಿನಲ್ಲಿ ಕರಾವಳಿ ಪ್ರವಾಸೋದ್ಯಮ ಸಮಾವೇಶ ನಡೆಸಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಲ್ಲಿ ಕಾಪು ಬೀಚ್, ಲೈಟ್ ಹೌಸ್, ಪಡುಬಿದ್ರಿ ಎಂಡ್ ಪಾಯಿಂಟ್, ಬ್ಲೂ ಫ್ಲ್ಯಾಗ್ ಬೀಚ್, ಕಾಪು ಮಾರಿಗುಡಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ, ಮಟ್ಟು ರಾಕ್ ದ್ವೀಪಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳಿಸಲು ಗುರುತಿಸಲಾಗಿದೆ ಎಂದು ಹೇಳಿದರು.
ರೈತರ ಕಲ್ಯಾಣ ಉದ್ದೇಶದ ಯೋಜನೆಗಳಿಗೆ ವಿವಿಧ ಇಲಾಖೆ ಮೂಲಕ ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ 95 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನವನ್ನು ಒದಗಿಸಿದೆ. ಇದರಿಂದ ಕಳೆದ ಸಾಲಿನಲ್ಲಿ ಕೃಷಿ ವಲಯದಲ್ಲಿ ಶೇ. 4 ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಜಿಲ್ಲೆಯ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ತಾಲೂಕು ಹಾಗೂ ಅತಿ ಹಿಂದುಳಿದ ಗ್ರಾಮೀಣ ಪ್ರದೇಶದ ಯುವಕ -ಯುವತಿಯರಿಗೆ ಕೌಶಲ್ಯ ತರಬೇತಿಯನ್ನು ಪಡೆಯಲು ಪೂರಕವಾಗುವಂತೆ ಅವರಿರುವ ಸ್ಥಳಕ್ಕೆ ತೆರಳಿ ತರಬೇತಿ ನೀಡಲು “ಸ್ಕಿಲ್ಸ್ ಆನ್ ವ್ಹೀಲ್ಸ್” ಎಂಬ ಕೌಶಲ್ಯ ರಥ ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಮೀನುಗಾರರಿಗೆ ಸ್ವಾವಲಂಭಿ ಜೀವನ ನಡೆಸಲು ಅನುಕೂಲವಾಗುವಂತೆ ಸಾಲ ಸೌಲಭ್ಯ, ವಿದ್ಯಾ ನಿಧಿ ಯೋಜನೆ, ಗುಂಪು ವಿಮಾ ಯೋಜನೆ ಸೇರಿದಂತೆ ವಸತಿ ರಹಿತ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ರಾಜ್ಯದಲ್ಲಿ ಇದುವೆರೆಗೆ 10 ಸಾವಿರ ವಸತಿಗಳನ್ನು ನೀಡಲಾಗಿದೆ ಎಂದರು.
ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಬದ್ಧರಾಗಿದ್ದು, ರಾಜ್ಯದಲ್ಲಿ “ಆರೋಗ್ಯ ಸೇತು” ಯೋಜನೆಯಡಿ 81 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ. ನಮ್ಮ ಜಿಲ್ಲೆಯ 4 ಸಂಚಾರಿ ಆರೋಗ್ಯ ಘಟಕಗಳು ದುರ್ಗಮ ಹಾಗೂ ಸಂಪರ್ಕ ರಹಿತ ಹಳ್ಳಿಗಳಿಗೆ ಸಂಚರಿಸಲಿದ್ದು, ಇದರಿಂದ ಜಿಲ್ಲೆಯ ಸುಮಾರು 9,218 ಕೊರಗ ಜನಾಂಗದ ನಾಗರಿಕರಿಗೆ ಸಹಕಾರಿಯಾಗಲಿದೆ. ಪ್ರಧಾನಮಂತ್ರಿ ಬೆಳೆ ವಿಮೆ ಅನುಷ್ಠಾನದಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಕೇಂದ್ರ ಸರ್ಕಾರವು ರಾಜ್ಯ ಕೃಷಿ ಇಲಾಖೆಗೆ ಇತ್ತೀಚೆಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಳಿಗೆ ರೈತರು ವಿಮೆ ಮಾಡಿಸುವ ಅವಕಾಶ ಕಲ್ಪಿಸಲಾಗಿದೆ ಎದು ಹೇಳಿದರು.
ದುರ್ಬಲರಿಗೆ ಸಹಾಯ ಹಸ್ತ, ಕೃಷಿಕರಿಗೆ ಸೌಕರ್ಯ, ಉದ್ಯಮಶೀಲರಿಗೆ ಒತ್ತಾಸೆ, ಸಾಮಾಜಿಕ ಸೌಹಾರ್ದದ ವಾತಾವರಣ ಅಭಿವೃದ್ಧಿಯ ಬುನಾದಿ ಎಂಬ ವಿಶ್ವಾಸದೊಂದಿಗೆ ಹತ್ತು ಹಲವು ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ನಾವು ಗಣರಾಜ್ಯೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿದ್ದು, ನ್ಯಾಯ ಸಮಾನತೆ ಮತ್ತು ಶಾಂತಿಯ ಮೌಲ್ಯಗಳನ್ನು ಎತ್ತಿ ಹಿಡಿಯೋಣ. ನಮ್ಮ ದೇಶದ ಅಭಿವೃದ್ಧಿಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ.ಎ.ಗಫೂರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
.jpeg)
.jpeg)

.jpeg)
.jpeg)
.jpeg)

