ಬಾವಿಗೆ ಬಿದ್ದು ಗಂಡು ಚಿರತೆ ಸಾವು
ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಬಾವಿಗೆ ಬಿದ್ದು ಚಿರತೆಯೊಂದು ಮೃತಪಟ್ಟಿದೆ.
ಸುಮಾರು ಮೂರು ವರ್ಷ ಪ್ರಾಯದ ಗಂಡು ಚಿರತೆ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಕುಟುಂಬದ ಸದಸ್ಯರು ನೀರು ಸೇದಲು ಬಾವಿಯ ಬಳಿ ಹೋದಾಗ ಚಿರತೆ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಸಮಾಜ ಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ ಅವರಿಗೆ ಮಾಹಿತಿ ನೀಡಿದ್ದು, ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಅರಣ್ಯಾಧಿಕಾರಿ ಹುಕ್ರಪ್ಪ ಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಯಿಯನ್ನು ಅಟ್ಟಿಸಿಕೊಂಡು ಹೋಗುವಾಗ ಚಿರತೆಯು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಚಿರತೆಯ ದೇಹವು ಕೊಳೆತ ಸ್ಥಿತಿಯಲ್ಲಿದ್ದುದನ್ನು ಗಮನಿಸಿದ ಅಧಿಕಾರಿಗಳು, ಇದು ಎರಡು-ಮೂರು ದಿನಗಳ ಹಿಂದೆಯೇ ಬಾವಿಗೆ ಬಿದ್ದು ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ.
ಈ ಪರಿಸರದ ಸುತ್ತಮುತ್ತ ಹಲವಾರು ಮನೆಗಳಿದ್ದು, ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ಗ್ರಾಮಸ್ಥರ ಆತಂಕದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಲವು ಬಾರಿ ಬೋನು ಇರಿಸಿದ್ದರೂ, ಯಾವುದೇ ಚಿರತೆ ಸೆರೆ ಸಿಕ್ಕಿರಲಿಲ್ಲ.
ಅರಣ್ಯಾಧಿಕಾರಿ ಹುಕ್ರಪ್ಪ ಗೌಡ ನೇತೃತ್ವದ ತಂಡವು ಚಿರತೆಯ ದೇಹವನ್ನು ಬಾವಿಯಿಂದ ಮೇಲೆತ್ತಿ, ಪಶುವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.