ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ನ್ಯಾಯಾಧೀಶರ ಎದುರೇ ವ್ಯಕ್ತಿಯೊರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದವರನ್ನು ಪುತ್ತೂರು ತಾಲೂಕಿನ ಕಾವು ಮಾನ್ಯಡ್ಕ ನಿವಾಸಿ ರವಿ (35) ಎಂದು ಗುರುತಿಸಲಾಗಿದೆ.
ರವಿ ಮತ್ತು ಆತನ ಪತ್ನಿ ವಿದ್ಯಾಶ್ರೀ ನಡುವೆ ಕಳೆದ ಕೆಲ ದಿನಗಳಿಂದ ಕಲಹ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಯತ್ನ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಗಂಡ ಹೆಂಡತಿ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬುಧವಾರ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಿಚ್ಛೇದನ ಸಂಬOಧ ಮಾತುಕತೆ ಕೂಡ ನಡೆದಿತ್ತು. ಠಾಣೆಗೆ ಹಾಜರಾಗುವಂತೆ ಪೊಲೀಸರು ರವಿಗೆ ಸೂಚನೆ ನೀಡಿದ್ದರು.
ಈ ಮಧ್ಯೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಆಗಮಿಸಿ, 5ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ಎದುರಲ್ಲಿಯೇ ವಿಷ ಸೇವಿಸಿದ್ದಾನೆ. ಬಳಿಕ ರವಿ ನ್ಯಾಯಾಲಯದ ಆವರಣದಲ್ಲೇ ವಾಂತಿ ಮಾಡಿದ್ದು, ತಕ್ಷಣ ಎಚ್ಚೆತ್ತ ಸಿಬ್ಬಂದಿ ಹಾಗೂ ಸಾರ್ವಜನಿಕರು ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಗೇರು ತೋಟದಲ್ಲಿ ಸಿಂಪಡಣೆಗೆ ಬಳಸುವ, ಎಂಡೋಸಲ್ಫಾನ್ ನಿಷೇಧದ ಬಳಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೀಟನಾಶಕವನ್ನು ರವಿ ಸೇವಿಸಿದ್ದಾನೆ ಎನ್ನಲಾಗಿದೆ.
ಆತನ ಆರೋಗ್ಯ ಸ್ಥಿತಿ ಗಂಭೀರಗೊAಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಗೆ ಸಂಬAಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.