-->
 ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ; ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ

ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ; ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ


ಪರ್ಯಾಯ ಸಂದರ್ಭದಲ್ಲಿ ಭಗವಧ್ವಜ ಹಾರಿಸಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರ ವಿರುದ್ಧ ಕಾಂಗ್ರೆಸ್ ಮನವಿಗೆ ಸ್ಪಂಧಿಸಿ ಸರ್ಕಾರ ಕ್ರಮಕ್ಕೆ ಮುಂದಾದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ಉಡುಪಿ ಜಿಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. 

ಹಿಂದೂ ವಿರೋಧಿ ನೀತಿಗಳ ಮೂಲಕ ಮತೀಯ ಶಕ್ತಿಗಳ ಓಲೈಕೆಗೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರಕಾರ ಇದುವರೆಗೆ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿತ್ತು. ಇದೀಗ ಪರ್ಯಾಯೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಭಗವಧ್ವಜ ಹಾರಿಸಿದ ವಿಚಾರವನ್ನು ವಿವಾದವಾಗಿ ಸೃಷ್ಟಿಸಿ ಉಡುಪಿ ಜಿಲ್ಲಾಧಿಕಾರಿಗಳನ್ನು ಟಾರ್ಗೆಟ್ ಮಾಡುವ ಮೂಲಕ ಮತೀಯ ಶಕ್ತಿಗಳನ್ನು ಖುಷಿ ಪಡಿಸಲು ಮುಂದಾಗಿರುವುದು ದುರಂತ. ಈ ಎಲ್ಲಾ ಬೆಳವಣಿಗೆಗಳಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಬಗ್ಗೆ ತೋರಿದ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣ. ಕಳೆದ ಹಲವು ದಶಕಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ರಾಜ್ಯ ಸರ್ಕಾರದ ಪ್ರತಿನಿಧಿಗಳು ಉಡುಪಿಯ ಪರ್ಯಾಯೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡುವುದು ಸಂಪ್ರದಾಯವಾಗಿದೆ. ಉಡುಪಿ ಜಿಲ್ಲೆಗೆ ಅತಿಥಿಯಂತೆ ಭೇಟಿ ನೀಡುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಾರಿಯ ಪರ್ಯಾಯ ಮಹೋತ್ಸವದ ಬಗ್ಗೆ ಒಂದೇ ಒಂದು ಪೂರ್ವ ಸಿದ್ಧತಾ ಸಭೆಯನ್ನೂ ನಡೆಸಿಲ್ಲ. ಅಲ್ಲದೆ ಕರಾವಳಿ ಕರ್ನಾಟಕದ ನಾಡಹಬ್ಬ ಎನಿಸಿರುವ ಉಡುಪಿ ಪರ್ಯಾಯ ಮಹೋತ್ಸವ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡು ಉಡುಪಿ ಜಿಲ್ಲೆಯ ಸಮಸ್ತ ಜನತೆಗೆ ಅಪಮಾನ ಮಾಡಿರುವುದು ವಾಸ್ತವ ಎಂದು ಕಿಡಿ ಕಾರಿದರು. 

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಸ್ವತಃ ಆಗಮಿಸಿ ಪರ್ಯಾಯೋತ್ಸವದ ವೈಭವದ ಶೋಭಾಯಾತ್ರೆಗೆ ಭಗವಧ್ವಜವನ್ನು ಹಾರಿಸಿ ಚಾಲನೆ ನೀಡಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಅವರ ರಾಜೀನಾಮೆಯನ್ನು ಕೇಳುವ ತಾಕತ್ತು ಇದೆಯೇ? ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬAತೆ ಜಿಲ್ಲಾಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸುವ ಮೂಲಕ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಿದ ಕಾಂಗ್ರೆಸ್, ಜಿಲ್ಲಾಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಅನುದಾನವನ್ನು ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ಷುಲ್ಲಕ ರಾಜಕೀಯ ಲಾಭ ಪಡೆಯಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಜಗದ್ವಿಖ್ಯಾತ ಉಡುಪಿ ಪರ್ಯಾಯೋತ್ಸವ ಕಾರ್ಯಕ್ರಮದಲ್ಲೂ ಅನಗತ್ಯ ವಿವಾದ ಸೃಷ್ಟಿಸುವ ಮೂಲಕ ಲಕ್ಷಾಂತರ ಭಕ್ತ ಸಮೂಹದ ಧಾರ್ಮಿಕ ನಂಬಿಕೆಗೆ ಘಾಸಿಯನ್ನುಂಟು ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಹಿಂದೂ ಧರ್ಮದ ಭಗವಧ್ವಜದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಹಾಗೂ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪದಾಧಿಕಾರಿಗಳನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸುವಂತೆ ಕುತ್ಯಾರು ನವೀನ್ ಶೆಟ್ಟಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.


Ads on article

Advertise in articles 1

advertising articles 2

Advertise under the article