ಅಂತರ್ ರಾಜ್ಯ ಮನೆಗಳ್ಳನ ಬಂಧನ; ಕಾಪು ಪೊಲೀಸರ ಕಾರ್ಯಾಚರಣೆ
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬOಧಿಸಿ ಕುಖ್ಯಾತ ಅಂತರ್‌ರಾಜ್ಯ ಕಳ್ಳನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ತಮಿಳುನಾಡು ಮೂಲದ ಪ್ರಸ್ತುತ ಮಲ್ಲಾರು ಫಕೀರನಕಟ್ಟೆ ನಿವಾಸಿ ಉಮೇಶ್ ಬಳೆಗಾರ @ ಉಮೇಶ್ ಪಿ @ ಉಮೇಶ್ ರೆಡ್ಡಿ (47) ಎಂದು ಗುರುತಿಸಲಾಗಿದೆ
2025ರ ಡಿಸೆಂಬರ್ 4 ರಂದು ಹಗಲು ವೇಳೆ ಮಲ್ಲಾರು ಗ್ರಾಮದ ರಾಮನಾಥ ಕೃಪಾ ಎಂಬ ಮನೆಯ ನಿವಾಸಿ ರಾಘವೇಂದ್ರ ಕಿಣಿ ಅವರು ಮನೆಗೆ ಹೊರಗಿನಿಂದ ಬೀಗ ಹಾಕಿ ಕೀಲಿಯನ್ನು ವಿದ್ಯುತ್ ಮೀಟರ್ ಬಾಕ್ಸ್ನಲ್ಲಿ ಇಟ್ಟು ತೆರಳಿದ್ದರು. ಈ ಸಂದರ್ಭ ಕಳ್ಳರು ಮೀಟರ್ ಬಾಕ್ಸ್ನಲ್ಲಿದ್ದ ಕೀಲಿಯನ್ನು ಬಳಸಿ ಮನೆ ಬಾಗಿಲು ತೆರೆದು ಒಳಗಿನಿಂದ ಲಾಕ್ ಮಾಡಿಕೊಂಡು, ಬೆಡ್‌ರೂಂನ ಕಪಾಟಿನಲ್ಲಿ ಇಟ್ಟಿದ್ದ ಸುಮಾರು 3.90 ಲಕ್ಷ ಮೌಲ್ಯದ 72 ಗ್ರಾಂ ಚಿನ್ನದ ಆಭರಣಗಳು ಹಾಗೂ ಸುಮಾರು 1,500 ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ್, ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಹಾಗೂ ಉಪವಿಭಾಗದ ಉಪಾಧೀಕ್ಷಕ ಪ್ರಭು ಡಿ.ಟಿ ಅವರ ನಿರ್ದೇಶನದಂತೆ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ ಅವರ ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಉಮೇಶ್ ಬಳೆಗಾರ ವಿರುದ್ಧ ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 16 ಪ್ರಕರಣಗಳು ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸುಮಾರು 8 ಪ್ರಕರಣಗಳಲ್ಲಿ ಈಗಾಗಲೇ ಶಿಕ್ಷೆಯಾಗಿದೆ. ಕೇರಳದ ತನ್ನಿಪಲಂ, ಮಾವೂರು, ತ್ರಿಶೂರ್ ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ನಗರ, ಮೂಡಬಿದ್ರೆ, ಉತ್ತರ ಕನ್ನಡ ಜಿಲ್ಲೆಯ ಶಿರ್ಸಿ ಗ್ರಾಮಾಂತರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಠಾಣೆಗಳಲ್ಲಿ ಜಾಮೀನುರಹಿತ ಬಂಧನ ವಾರಂಟ್‌ಗಳು ಜಾರಿಯಾಗಿವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಠಾಣೆಯ ಪ್ರಕರಣದಲ್ಲಿ ಎಲ್.ಪಿ.ಸಿ ವಾರಂಟ್ ಜಾರಿಯಲ್ಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಯ ಎರಡು ಪ್ರಕರಣಗಳಲ್ಲಿ ನ್ಯಾಯಾಲಯವು ಪ್ರೊಕ್ಲಮೇಶನ್ ಹೊರಡಿಸಿದೆ.
ಈ ಕಾರ್ಯಾಚರಣೆಯಲ್ಲಿ ಪಡುಬಿದ್ರೆ ಪೊಲೀಸ್ ಉಪನಿರೀಕ್ಷಕರಾದ ಅನಿಲ್ ಕುಮಾರ್ ಟಿ. ನಾಯ್ಕ, ಕಾಪು ಪಿಎಸ್‌ಐ ಶುಭಕರ, ಪಡುಬಿದ್ರೆ ಎಎಸ್‌ಐ ರಾಜೇಶ್, ಮೋಹನಚಂದ್ರ, ರಘು, ಜೀವನ್, ಜೀಪು ಚಾಲಕ ಜಗದೀಶ್ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಮತ್ತು ನಿತಿನ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.