ಪರಶುರಾಮ ಥೀಂ ಪಾರ್ಕ್ ಗೆ ದುರ್ಗತಿ ಬರಲು ಶಾಸಕ ಸುನಿಲ್ ಕಾರಣ; ಮುನಿಯಾಲು ಉದಯಕುಮಾರ್ ಶೆಟ್ಟಿ
ಕಾರ್ಕಳದ ಪರಶುರಾಮ ಥೀಮ್ ಪಾರ್ಕಿನಲ್ಲಿ ಎರಡನೆಯ ಬಾರಿ ಕಳ್ಳತನ ನಡೆದಿದೆ.ಮೊದಲನೇ ಬಾರಿ ಕಳ್ಳತನ ನಡೆದಿದ್ದು, ಕಂಚಿನ ಬದಲು ಪರಶುರಾಮರ ಪೈಬರ್ ಮಿಶ್ರಿತ ನಕಲಿ ಪ್ರತಿಮೆ ನಿರ್ಮಿಸಿ, ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಸುನೀಲ್ ಕುಮಾರ್ ನಿರ್ದೇಶನದಂತೆ ಕಳ್ಳತನ ನಡೆಸಲಾಗಿತ್ತು ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ.
ಮೊದಲನೇ ಬಾರಿ ಪರಶುರಾಮ ಪ್ರತಿಮೆಯ ಸೊಂಟದ ಮೇಲಿನ ಭಾಗ ಕಳ್ಳತನವಾದಾಗ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಿದ್ದು ಯಾಕೆ..? ಆ ಕಳ್ಳತನ ಸುನೀಲ್ ಕುಮಾರ್ ನಿರ್ದೇಶನದಂತೆ ನಡೆದ ಕಾರಣ ಆಗ ಮೌನವಾಗಿದ್ದರು ಎಂದುಕೊಳ್ಳಬೇಕಾಗುತ್ತದೆ. ಕೋಟ್ಯಾಂತರ ರೂಪಾಯಿ ಸರ್ಕಾರದ ಅನುದಾನದವನ್ನು ಬಳಿಸಿ ಕಂಚಿನ ಪ್ರತಿಮೆಯ ಬದಲು ನಕಲಿ ಪರಶುರಾಮ ಪ್ರತಿಮೆ ನಿರ್ಮಿಸಿ ಜನತೆಗೆ ಮೋಸ ಮಾಡಿದಾಗಲೇ ಪರಶುರಾಮ ಥೀಮ್ ಪಾರ್ಕಿನ ಮೂಲಕ ತೆರೆದುಕೊಳ್ಳಬೇಕಾಗಿದ್ದ ಸುಂದರ ಪ್ರವಾಸೋದ್ಯಮದ ಯೋಜನೆ ನುಚ್ಚುನೂರಾಗಿತ್ತು. ಯೋಜನೆಯ ಆರಂಭದಲ್ಲೇ ಪರಶುರಾಮ ಪ್ರತಿಮೆ ನಿರ್ಮಾಣದ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರೆ ಇಂದು ಇಂತಹ ದುರ್ಗತಿ ಬರುತ್ತಿರಲಿಲ್ಲ ಎಂದರು.
ಕOಚಿನ ಪ್ರತಿಮೆ ಎಂದು ಜನರನ್ನು ಹಾಗೂ ಸರ್ಕಾರವನ್ನು ನಂಬಿಸಿ ಮೋಸ ಮಾಡಿದ ಸುನಿಲ್ ಕುಮಾರ್ ಅವರಿಂದಾಗಿ ಇಂದು ಪರಶುರಾಮ ಥೀಮ್ ಪಾರ್ಕ್ ಗೆ ಕಳ್ಳಕಾಕರು ನುಗ್ಗುವಂತಾಗಿದೆ. ಶಾಸಕ ಸುನೀಲ್ ಕುಮಾರ್ ಮಾಡಿದ ಮೋಸದಿಂದಾಗಿ ಈ ಕಳ್ಳತನ ನಡೆದಿದ್ದು ಕಾರ್ಕಳದ ಜನತೆಯ ಕನಸಿನ ಪ್ರವಾಸಿ ತಾಣವಾಗಬೇಕಿದ್ದ ಪರಶುರಾಮ ಥೀಮ್ ಪಾರ್ಕ್ ಗೆ ಇಂತಹ ದುರ್ಗತಿ ಬರಲು ಕಾರಣವಾದ ಶಾಸಕ ಸುನೀಲ್ ಕುಮಾರ್ ತಕ್ಷಣ ಜನತೆಯ ಕ್ಷಮೆ ಯಾಚಿಸಬೇಕು ಎಂದು ಕಿಡಿ ಕಾರಿದರು.
ಒಬ್ಬ ಸಮಯ ಸಾಧಕ, ಸ್ವಾರ್ಥಿ, ಚುನಾವಣೆಗಾಗಿ ಹಿಂದೂ ಧರ್ಮಕ್ಕೂ, ಜನರಿಗೂ ಮೋಸ ಮಾಡುವ ನೀಚ ಮನಸ್ಥಿತಿಯ ಸುನೀಲ್ ಕುಮಾರ್ ಅವರಂತವರಿOದಾಗಿ ಇಂದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೀಯ ಬಿಂದುವಾಗಬೇಕಿದ್ದ ಕಾರ್ಕಳ ವಿವಾದದ ತಾಣವಾಗಿರುವುದು ಅತ್ಯಂತ ಬೇಸರದ ಸಂಗತಿ. ಈ ಕೂಡಲೇ ಸರ್ಕಾರದ ಸ್ವತ್ತನ್ನು ಕಳವುಗೈದ ದುಷ್ಕರ್ಮಿಗಳನ್ನು ಬಂಧಿಸಬೇಕು, ಸರ್ಕಾರದ ಸ್ವತ್ತನ್ನು ರಕ್ಷಿಸಲು ಸೂಕ್ತ ಭದ್ರತೆ ಒದಗಿಸಬೇಕೆಂದು ಪೋಲಿಸ್ ಇಲಾಖೆಗೆ ಆಗ್ರಹಿಸುತ್ತಿದ್ದೇನೆ ಎಂದು ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ.