ಅಂತರ್‌ರಾಜ್ಯ ದ್ವಿಚಕ್ರ ವಾಹನ ಕಳ್ಳರಿಬ್ಬರ ಬಂಧನ
ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಂತರ್‌ರಾಜ್ಯ ಮೋಟರ್‌ಸೈಕಲ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಉಡುಪಿ ಪೊಲೀಸರು, ಕೇರಳ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಶಿಕ್ ಅನ್ಸಾರ್ (19), ಮಹಮ್ಮದ್ ಅಲ್ತಫ್ (23) ಬಂಧಿತ ಆರೋಪಿಗಳು. ಬಂಧಿತರಿಂದ ಕಳವು ಮಾಡಿದ್ದ ಮೋಟರ್‌ಸೈಕಲ್‌ನ್ನು ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ 29 ಬೆಳಿಗ್ಗೆ ಕರಾವಳಿ ಬೈಪಾಸ್‌ನ ಲ್ಯಾಂಡ್‌ಮಾರ್ಕ್ ಬಿಲ್ಡಿಂಗ್ ಬಳಿ ನಿಲ್ಲಿಸಿದ್ದ 70,000 ರೂಪಾಯಿ ಮೌಲ್ಯದ ಮೋಟರ್‌ಸೈಕಲ್‌ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ತಿಳಿದುಬಂದಿತ್ತು. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೇರಳ ರಾಜ್ಯದ ಮುಕ್ಕಂ (ಕೋಯಿಕ್ಕೋಡು ಜಿಲ್ಲೆ) ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕಪ್ಪು ಬಣ್ಣದ ಯಮಹಾ R15 ಮೋಟರ್‌ಸೈಕಲನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಮೊದಲನೇ ಆರೋಪಿ ಆಶಿಕ್ ಅನ್ಸಾರ್ ವಿರುದ್ಧ ಕೇರಳ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿದ್ದು, ಎರಡನೇ ಆರೋಪಿ ಮಹಮ್ಮದ್ ಅಲ್ತಫ್ ವಿರುದ್ಧ ಕೇರಳ ರಾಜ್ಯದಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ.