ಉಡುಪಿ ಪರಿವಾರ್ ಬೇಕರಿ ಗ್ರೂಪ್ ಸ್ಥಾಪಕ ಕೆ. ಗೋಪಾಲ ನಿಧನ
Monday, January 19, 2026
ಉಡುಪಿಯ ಪ್ರತಿಷ್ಠಿತ ಪರಿವಾರ್ ಬೇಕರಿ ಗ್ರೂಪ್ ನ ಸ್ಥಾಪಕರಾಗಿರುವ ಕಿನ್ನಿಮುಲ್ಕಿ ನಿವಾಸಿ ಕೆ. ಗೋಪಾಲ (86) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕೆ. ಗೋಪಾಲ ಅವರು 24 ವರ್ಷಗಳ ಕಾಲ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಸಮಾಜವನ್ನು ಸಂಘಟಿಸುವುದರ ಜೊತೆಗೆ ಬಾರ್ಕೂರಿನಲ್ಲಿರುವ ಗಾಣಿಗ ಸಮಾಜದ ಕುಲದೇವರಾದ ವೇಣುಗೋಪಾಲಕೃಷ್ಣ ದೇಗುಲದ ಪುನರ್ ನಿರ್ಮಾಣ ದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ದೇಗುಲದ ವಿವಿಧ ಹಂತದ ಜೀರ್ಣೋದ್ಧಾರ, ಸುತ್ತು ಪೌಳಿ, ಸ್ವಾಗತ ಗೋಪುರ, ರಾಜಗೋಪುರ ನಿರ್ಮಾಣ, ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು.
ಸಮಾಜದ ಸಂಘಟನೆಗೆ ಪೂರಕವಾಗಿ ವೇಣುಗೋಪಾಲಕೃಷ್ಣ ಎಜುಕೇಶನ್ ಸೊಸೈಟಿ ಸ್ಥಾಪನೆ, ಅಶಕ್ತ ಯಕ್ಷಗಾನ ಕಲಾವಿದರಿಗೆ ಯಕ್ಷನಿಧಿ ಸ್ಥಾಪನೆ, ಯುವ ಸಂಘಟನೆಗಳ ಸ್ಥಾಪನೆ, ವಲಯಗಳ ರಚನೆ, ಅನ್ನಪೂರ್ಣೇಶ್ವರಿ ಮಹಿಳಾ ಬಳಗ ಸ್ಥಾಪನೆ ಮತ್ತು ಸಂಪರ್ಕ ಸುಧಾ ಪತ್ರಿಕೆಯ ಬೆಳವಣಿಗೆಗೆ ಸಹಕಾರ ಹೀಗೆ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅವರ ಅಗಲುವಿಕೆಗೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.