🔥🔥ಪ್ರೀತಿ ನಿರಾಕರಿಸಿದ ದಲಿತ ಮಹಿಳೆಯ ಬರ್ಬರ ಹತ್ಯೆ..🔥🔥
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಳಮ್ಮನಗರದಲ್ಲಿ ದಲಿತ ಮಹಿಳೆಯೊಬ್ಬರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.
ರಾಮಾಪುರ ಸರಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಂಜಿತಾ ಮಲ್ಲಪ್ಪ ಬನಸೋಡೆ (30) ಹತ್ಯೆಗೀಡಾದ ಮಹಿಳೆ. ರಫೀಕ್ ಇಮಾಮಸಾಬ ಯಳ್ಳೂರ (30) ಕೊಲೆಗೈದ ಆರೋಪಿ ಎಂದು ತಿಳಿದು ಬಂದಿದೆ.
ಮದುವೆಯಾಗಿ ವಿಚ್ಛೇದನ ಹೊಂದಿದ್ದ ರಂಜಿತಾಗೆ ರಫೀಕ್ ಅನೇಕ ವರ್ಷಗಳಿಂದ ಪರಿಚಿತನಾಗಿದ್ದು, ತನ್ನನ್ನು ಪ್ರೀತಿಸಿ ಮದುವೆಯಾಗುವಂತೆ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ನಿರಾಕರಿಸಿದ ರಂಜಿತಾ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ರಫೀಕ್, ರಂಜಿತಾ ಕೆಲಸ ಮುಗಿಸಿ ಶಾಲೆಯಿಂದ ಬರುತ್ತಿರುವ ಸಂದರ್ಭಆಕೆಯನ್ನು ಅಡ್ಡಗಟ್ಟಿದ್ದು, ಈ ವೇಳೆ ಇಬ್ಬರ ನಡುವೆ ವಾದ ವಿವಾದ ನಡೆದಿದೆ. ಈ ವೇಳೆ ಆರೋಪಿ ರಫೀಕ್ ಹರಿತವಾದ ಆಯುಧದಿಂದ ರಂಜಿತಾಳ ಕತ್ತು ಸೀಳಿ ಅರಣ್ಯದೊಳಗೆ ಓಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.ಗಂಭೀರವಾಗಿ ಗಾಯಗೊಂಡ ರಂಜಿತಾಳನ್ನು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತಳ ಸಹೋದರಿ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.