ಉಡುಪಿ ಎಂಜಿಎಂ ಕಾಲೇಜಿನಲ್ಲಿ ಕೆಮ್ತೂರು ತುಳು ನಾಟಕ ಪರ್ಬ ಉದ್ಘಾಟನೆ
Tuesday, January 06, 2026
ತುಳುನಾಡಿನಲ್ಲಿ ತುಳು ನಾಟಕ ಆರಂಭವಾದ ಘಟ್ಟ ಚಳುವಳಿ ರೂಪದಲ್ಲಿಯೇ ಆರಂಭವಾಗಿತ್ತು.1910ನೇ ಇಸವಿ ಯಲ್ಲಿಯೇ ತುಳು ನಾಟಕ ಕೂಟವನ್ನು ಕಟ್ಟಿಕೊಂಡು ಜನಜಾಗೃತಿ ಮೂಡಿಸುವ ಕೆಲಸ ಮಾಡಿತ್ತು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ತಿಳಿಸಿದರು.
ಅವರು ಉಡುಪಿ ಎಮ್.ಜಿ.ಎಮ್.ಕಾಲೇಜಿನ ಮುದ್ದಣ ಮಂಟಪದಲ್ಲಿ ತುಳುಕೂಟ ಉಡುಪಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಜಂಟಿ ಆಶ್ರಯದಲ್ಲಿ ನಡೆದ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಇವರ ನೆನಪಿನಲ್ಲಿ ನಡೆದ ಕೆಮ್ತೂರು ತುಳು ನಾಟಕ ಪರ್ಬ ವನ್ನು ಉದ್ಘಾಟಿಸಿ ಮಾತನಾಡಿದರು.
ತುಳು ಕೂಟದ ಸ್ಥಾಪಕ ಅಧ್ಯಕ್ಷ ಭಾಸ್ಕರಾನಂದ ಕುಮಾರ್ ಇವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ,ಎಮ್.ಜಿ.ಎಮ್.ಕಾಲೇಜಿನ ಪ್ರಾಂಶುಪಾಲೆ ವನಿತ ಮಯ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನಾಗೇಶ್ ಕುಮಾರ್ ಉದ್ಯಾವರ, ತುಳುಕೂಟದ ಉಪಾಧ್ಯಕ್ಷ ದಿವಾಕರ ಸನಿಲ್, ಶೋಭಾ ಶೆಟ್ಟಿ, ಕೆಮ್ತೂರು ಕುಟುಂಬದ ಪರವಾಗಿ, ವಿಜಯ್ ಕುಮಾರ್ ಶೆಟ್ಟಿ, ತುಳುಕೂಟದ ಕೋಶಾಧಿಕಾರಿ ಚೈತನ್ಯ ಎಮ್.ಜಿ., ಗೌರವ ಸಲಹೆಗಾರರಾದ ವಿಶ್ವನಾಥ ಶೆಣೈ ಉಪಸ್ಥಿತರಿದ್ದರು.
ಕೆಮ್ತೂರು ನಾಟಕ ಸ್ಪರ್ಧೆಯ ಸಂಚಾಲಕ ಕೆ.ಪ್ರಭಾಕರ ಭಂಡಾರಿ ನಾಟಕದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷರಾದ ಭುವನ ಪ್ರಸಾದ್ ಹೆಗ್ಡೆ ಸ್ವಾಗತಿಸಿದರು.ಕಾರ್ಯದರ್ಶಿ ಗಂಗಾಧರ ಕಿದಿಯೂರು ಧನ್ಯವಾದವಿತ್ತರು.ವಿ.ಕೆ.ಯಾದವ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸಭಾ ಕಾರ್ಯಕ್ರಮದ ಬಳಿಕ ಕಲಾಮಂದಿರ ಉಡುಪಿ ಇವರಿಂದ ಪ್ರಥಮ ದಿನದ ನಾಟಕ ಪಿಲಿ ಪ್ರದರ್ಶನ ಗೊಂಡಿತು.

