ಉಡುಪಿಯಲ್ಲಿ ‘ಕರಾವಳಿಯ ನಿರ್ದಿಗಂತ’ ಉದ್ಘಾಟನೆ
ಇಂದು ರಾಜಕೀಯ ಸುಳ್ಳುಗಳು ಬಹಳಷ್ಟು ಕ್ರೂರ ರೂಪದಲ್ಲಿ ನಮ್ಮ ಮುಂದೆ ನಿಂತಿವೆ. ಆ ಕ್ರೂರ ಸುಳ್ಳುಗಳನ್ನು ಎದುರಿಸುವುದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ರಂಗಭೂಮಿಯ ಮೂಲಕ ಅವುಗಳನ್ನು ಮಣಿಸುವ ಪ್ರಯತ್ನ ಅಗತ್ಯವಾಗಿದೆ ಎಂದು ಸಾಹಿತಿ ಹಾಗೂ ಚಿಂತಕ ಫಕೀರ್ ಮುಹಮ್ಮದ್ ಕಟಪಾಡಿ ಹೇಳಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಭಾನುವಾರ ‘ಕರಾವಳಿಯ ನಿರ್ದಿಗಂತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ನಿರ್ದಿಗಂತ' ಎಂಬ ಶಬ್ದವೇ ನಮ್ಮನ್ನು ವಿಭಿನ್ನ ಪ್ರಪಂಚಕ್ಕೆ ಕರೆದೊಯ್ಯುವ ಶಕ್ತಿ ಹೊಂದಿದೆ. ಕುವೆಂಪು ಅವರು ಸೃಷ್ಟಿಸಿದ ನಿರ್ದಿಗಂತದ ಕಲ್ಪನೆಯನ್ನು ಪ್ರಕಾಶ್ ರಾಜ್ ಅವರು ಇನ್ನಷ್ಟು ವಿಶಾಲಗೊಳಿಸಿದ್ದಾರೆ. ನಿರ್ದಿಗಂತ ತಂಡದ ಉದ್ದೇಶಗಳು ಯಶಸ್ವಿಯಾಗಲಿ, ಅವರು ಸದಾ ಗೆಲ್ಲಲಿ ಎಂದು ಫಕೀರ್ ಮುಹಮ್ಮದ್ ಕಟಪಾಡಿ ಹಾರೈಸಿದರು.
ಈ ಸಂದರ್ಭದಲ್ಲಿ ನಿರ್ದಿಗಂತದ ಸ್ಥಾಪಕ, ರಂಗಕರ್ಮಿ ಹಾಗೂ ಚಿತ್ರನಟ ಪ್ರಕಾಶ್ ರಾಜ್ ಉಪಸ್ಥಿತರಿದ್ದರು. ರಂಗ ನಿರ್ದೇಶಕ ಗಣೇಶ್ ಮಂದಾರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ಪ್ರಕಾಶ್ ರಾಜ್ ಹಾಗೂ ನಿರ್ದಿಗಂತ ತಂಡದಿAದ ಸಮತೆಯ ಹಾಡು ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಬಿಂದು ರಕ್ಷಿದಿ ನಿರ್ದೇಶನದಲ್ಲಿ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ 'ಮೃಗ ಮತ್ತು ಸುಂದರಿ' ನಾಟಕ ಪ್ರದರ್ಶನಗೊಂಡಿತು. ಅಪರಾಹ್ನ ವರದರಾಜ್ ಬಿರ್ತಿ ರಚಿಸಿ, ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮಕ್ಕಳಿಂದ ವಿಜ್ಞಾನ ನಾಟಕ 'ಕ್ಯೂರಿಯಸ್' ಪ್ರದರ್ಶನಗೊಂಡಿತು. ಸಂಜೆ ಉದ್ಘಾಟನಾ ಸಮಾರಂಭದ ನಂತರ ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಮಕ್ಕಳ ನಾಟಕ 'ಕುಣಿ ಕುಣಿ ನವಿಲೇ' ಪ್ರದರ್ಶನಗೊಂಡಿತು.