-->
 ಶಿಕ್ಷಕರು ಮಕ್ಕಳನ್ನು ಭವ್ಯ ಭಾರತಕ್ಕಾಗಿ ಸಶಕ್ತಗೊಳಿಸಬೇಕಿದೆ: ಡಾ.ವಾದಿರಾಜ ಗೋಪಾಡಿ

ಶಿಕ್ಷಕರು ಮಕ್ಕಳನ್ನು ಭವ್ಯ ಭಾರತಕ್ಕಾಗಿ ಸಶಕ್ತಗೊಳಿಸಬೇಕಿದೆ: ಡಾ.ವಾದಿರಾಜ ಗೋಪಾಡಿ


ಮಾರುಕಟ್ಟೆ ಅಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವ ಇಂಥ ಸಂದರ್ಭದಲ್ಲಿಯೇ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ಸಮಾಜ ಮುಂದೆ ಪ್ರದರ್ಶಿಸಬೇಕಾಗಿದೆ. ಭಾವನಾತ್ಮಕ ಮತ್ತು ರಚನಾತ್ಮಕ ಯೋಜನೆಗಳ ಮೂಲಕ ಮುಂದಿನ ಪೀಳಿಗೆಯನ್ನು ಬದುಕು ಮತ್ತು ಭಾರತಕ್ಕಾಗಿ ಸಶಕ್ತಗೊಳಿಸಬೇಕಿದೆ ಎಂದು ಎಂ.ಐ.ಟಿ ಯ ಪ್ರಾಧ್ಯಾಪಕರಾದ ಡಾ.ವಾದಿರಾಜ ಗೋಪಾಡಿ ಹೇಳಿದ್ದಾರೆ. 


ಅವರು ಉಡುಪಿಯ ಶ್ರೀ ಪೂರ್ಣಪ್ರಜ್ಞ  ಸಂಧ್ಯಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಹಯೋಗದೊಂದಿಗೆ ನಡೆದ ಕರ್ತವ್ಯ ಬೋಧ ದಿವಸದಂದು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. 

ಜಗತ್ತು ಅತ್ಯಂತ ವೇಗವಾಗಿ ಬದಲಾವಣೆಗೆ ಒಳಗಾಗುತ್ತಿದೆ. ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣ ಪದದ ವ್ಯಾಪ್ತಿ ವ್ಯಾಪಕವಾಗಿ ಹಿಗ್ಗುತ್ತಿದೆ. ವಿದ್ಯಾರ್ಥಿಗಳ ನಡುವೆ ಮಾತ್ರವಲ್ಲದೆ ಅಧ್ಯಾಪಕರ ಹಾಗೂ ಶಾಲೆಗಳ ನಡುವೆಯೂ ಸ್ಪರ್ಧೆ ನಿರ್ಮಾಣವಾಗುತ್ತಿದೆ. ಕಲೆ, ಸಂಗೀತ, ಸಾಹಿತ್ಯ ಇವೆಲ್ಲವೂ ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳುತ್ತಿವೆ. ಮಾರುಕಟ್ಟೆ ಅಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವ ಇಂಥ ಸಂದರ್ಭದಲ್ಲಿಯೇ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ಸಮಾಜ ಮುಂದೆ ಪ್ರದರ್ಶಿಸಬೇಕಾಗಿದೆ. ಭಾವನಾತ್ಮಕ ಮತ್ತು ರಚನಾತ್ಮಕ ಯೋಜನೆಗಳ ಮೂಲಕ ಮುಂದಿನ ಪೀಳಿಗೆಯನ್ನು ಬದುಕು ಮತ್ತು ಭಾರತಕ್ಕಾಗಿ ಸಶಕ್ತಗೊಳಿಸಬೇಕಿದೆ. ಅದಕ್ಕಾಗಿ ಶಿಕ್ಷಕರು ಸಂಘಟಿತರಾಗಬೇಕಾದದ್ದು ಇಂದಿನ ಬಹು ದೊಡ್ಡ ಅನಿವಾರ್ಯತೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಇಂಥಹ ಜವಾಬ್ದಾರಿಯುತ ಅಧ್ಯಾಪಕರನ್ನು ಒಗ್ಗೂಡಿಸಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ನಾವೆಲ್ಲರೂ ಈ ಸಂಘಟನೆಯ ಬಲವರ್ಧನೆಗೊಳಿಸೋಣ ಎಂದರು.

 ಸ್ವಾಮೀ ವಿವೇಕಾನಂದರು ಹಾಗೂ ಸುಭಾಸ್ ಚಂದ್ರ ಭೋಸ್ ಇವರಿಬ್ಬರ ಜನ್ಮ ದಿನಗಳ ಸ್ಮರಣೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾOತ್ ಭಟ್ ವಹಿಸಿಕೊಂಡಿದ್ದರು. ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಕೆ.ಆರ್.ಎಂ.ಎಸ್ ಎಸ್ ನ ರಾಜ್ಯ ಕಾರ್ಯದರ್ಶಿಗಳಾದ ಡಾ. ಮಾಧವ ಎಂ.ಕೆ ಅವರು ಸಂಘದ ಸಾಧನೆಗಳನ್ನು ಉಲ್ಲೇಖಿಸಿ, ಉಡುಪಿ ಜಿಲ್ಲಾ ವಿಭಾಗದ ಪ್ರಸಕ್ತ ಸಾಲಿನ ಪದಾಧಿಕಾರಿಗಳ ಪಟ್ಟಿಯನ್ನು ಘೋಷಿಸಿದರು. ಕಾರ್ಯಕ್ರಮದಲ್ಲಿ 24-25 ನೇ ಸಾಲಿನಲ್ಲಿ ನಿವೃತ್ತರಾದ ಪ್ರಾಧ್ಯಾಪಕರನ್ನು ಸಮ್ಮಾನಿಸಲಾಯಿತು.  ಪ್ರೊ. ವಿದ್ಯಾ ಅಮ್ಮಣ್ಣಾಯ ಅವರು ಪ್ರಾರ್ಥಿಸಿ, ಸಂಘದ ಉಡುಪಿ ಜಿಲ್ಲಾಧ್ಯಕ್ಷರಾದ ಡಾ. ಸುರೇಂದ್ರ ಶೆಟ್ಟಿ ಅವರು ಸ್ವಾಗತಿಸಿದರು. ಡಾ.ಪ್ರಜ್ಞಾ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿ, ಡಾ. ಭೈರವಿ ಪಂಡ್ಯ ಅವರು ವಂದಿಸಿದರು.


Ads on article

Advertise in articles 1

advertising articles 2

Advertise under the article