ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ವೇದವರ್ಧನ ಶ್ರೀಗಳಿಂದ ಕೃಷ್ಣನಿಗೆ ಮೊದಲ ಪೂಜೆ
Sunday, January 18, 2026
ಶೀರೂರು ಮಠದ 31ನೇ ಯತಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಇಂದು (ಜ.18) ಮುಂಜಾನೆ ಸರ್ವಜ್ಞ ಪೀಠವನ್ನು ಅಲಂಕರಿಸಿದರು.
ಭವ್ಯ ಮೆರವಣಿಗೆ ಮೂಲಕ ಪಲ್ಲಕ್ಕಿಯಲ್ಲಿ ಸಾಗಿ ಬಂದ ವೇದವರ್ಧನ ಶ್ರೀಗಳು ಶ್ರೀಕೃಷ್ಣಮಠ ಪ್ರವೇಶಿಸಿದರು.
ಬೆಳಗ್ಗೆ 5.15 ಕ್ಕೆ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣ ದರ್ಶನ ಮಾಡಿ ಬಳಿಕ ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದರ್ಶನ ಮಾಡಿದರು.
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬೆಳಗ್ಗೆ 5:45ಕ್ಕೆ ಶ್ರೀ ವೇದವರ್ಧನ ತೀರ್ಥ ಶ್ರೀಪಾದರನ್ನು ಶ್ರೀ ಸರ್ವಜ್ಞ ಪೀಠಾರೋಹಣದಲ್ಲಿ ಕುಳ್ಳಿರಿಸಿದರು. ಶ್ರೀ ವೇದವರ್ಧನ ತೀರ್ಥರು ಮೊದಲಿಗೆ ತಾಯಿಯ ಪಾದಕ್ಕೆ ನಮಿಸಿ ಸರ್ವಜ್ಞ ಪೀಠ ಏರಿದರು.
ಬೆಳಗ್ಗೆ 5:55ಕ್ಕೆ ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ಸಾಂಪ್ರ ದಾಯಿಕ ದರ್ಬಾರ್ ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ ನಡೆಯಿತು.
ಬೆಳಗ್ಗೆ 6.15ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ಆರಂಭವಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಸದ ಯದುವೀರ್ ಒಡೆಯರ್ ಸೇರಿ ಅಷ್ಟ ಮಠದ ಯತಿಗಳು, ಜನಪ್ರತಿನಿಧಿಗಳು ಭಾಗಿಯಾಗಿದ್ದರು.
ಬೆಳಗ್ಗೆ 10.30ಕ್ಕೆ ಶ್ರೀಕೃಷ್ಣ ದೇವರ ಮಹಾಪೂಜೆ, ಪಲ್ಲಪೂಜೆ ಮಧ್ಯಾಹ್ನ 12ಕ್ಕೆ ಭೋಜನ ಪ್ರಸಾದ ವಿತರಣೆ ಆರಂಭಗೊಂಡಿತು.














