ದ್ವೇಷ ಭಾಷಣ; ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮಾನವ ಬಂಧುತ್ವ ವೇದಿಕೆ ದೂರು
ಪುತ್ತೂರು ವಿವೇಕಾನಂದ ಕಾಲೇಜಿನ ಆವರಣದಲ್ಲಿ ಜ.12ರಂದು ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದ ಸಭೆಯಲ್ಲಿ ಧ್ವೇಷ ಭಾಷಣ ಮಾಡಿದ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಸಮಿತಿ ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.
ಜ. 12ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಹದಿಹರೆಯದ ಬಾಲಕ ಬಾಲಕಿಯರು ಭಾಗವಹಿಸಿದ್ದ ಸಭೆಯಲ್ಲಿ ಸಮಾಜದ ವಿವಿಧ ನಾಗರಿಕ ಸಮುದಾಯಗಳ ನಡುವೆ ದ್ವೇಷ ಉಂಟಾಗುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕಾರ್ಯಕ್ರಮದ ವಿಡಿಯೋವನ್ನು ವಿಕಸನ ಟಿವಿ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದರಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಇತಿಹಾಸದ ಘಟನೆಗಳನ್ನು ಉಲ್ಲೇಖಿಸಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ಬಗ್ಗೆ ಅವಹೇಳನಕಾರಿ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದ್ವೇಷ ಭಾಷಣ ಮಾಡಿದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಭಾಷಣವನ್ನು ಪ್ರಸಾರ ಮಾಡಿದ ವಿಕಸನ ಟಿವಿ ಯೂಟ್ಯೂಬ್ ಚಾನೆಲ್ ಮೇಲೆಯೂ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಸಮಿತಿಯ ಪ್ರಧಾನ ಸಂಚಾಲಕ ರಾಮಚಂದ್ರ ಕೆ., ಪ್ರಮುಖರಾದ ಎಂ.ಬಿ. ವಿಶ್ವನಾಥ ರೈ, ಮೌರಿಸ್ ಮಸ್ಕರೇನ್ಹಸ್, ಎಚ್. ಮಹಮ್ಮದ್ ಆಲಿ, ಕೆನ್ಯೂಟ್ ಮಸ್ಕರೇನ್ಹಸ್, ಡಾ. ರಾಜಾರಾಮ್ ಕೆ.ಬಿ., ಬೋಲೋಡಿ ಚಂದ್ರಹಾಸ ರೈ, ಶಶಿಕಿರಣ್ ರೈ, ಅಬ್ದುಲ್ ರೆಹಮಾನ್ ಯೂನಿಕ್, ಉಲ್ಲಾಸ್ ಕೋಟ್ಯಾನ್, ಪ್ರಕಾಶ್ ಗೌಡ ತೆಂಕಿಲ ಸೇರಿದಂತೆ ಇತರರು ಉಪಸ್ಥಿತರಿದ್ದರು.