-->
SSLC ಪರೀಕ್ಷಾ ಕಲಿಕೆಗೆ ನಿರಂತರ ವಿದ್ಯುತ್ ಒದಗಿಸಿ: ಶೌರ್ಯ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಯಿಂದ ಸಿಎಂಗೆ ಮನವಿ

SSLC ಪರೀಕ್ಷಾ ಕಲಿಕೆಗೆ ನಿರಂತರ ವಿದ್ಯುತ್ ಒದಗಿಸಿ: ಶೌರ್ಯ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಯಿಂದ ಸಿಎಂಗೆ ಮನವಿ


ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಗೆ ತಯಾರಾಗುತ್ತಿರುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಹಿತದೃಷ್ಟಿಯಿಂದ ನಿರಂತರ ವಿದ್ಯುತ್ ಸರಬರಾಜು ಒದಗಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿ ಹೊಯ್ಸಳ ಶೌರ್ಯ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿ ಮಾಸ್ಟರ್ ದೀಪೇಶ್ ದೀಪಕ್ ಶೆಣೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕುಂಜಿಬೆಟ್ಟು ಟಿ.ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಮಾಸ್ಟರ್ ದೀಪೇಶ್ ದೀಪಕ್ ಶೆಣೈ, ತಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ಅನಿಯಮಿತ ಹಾಗೂ ಅಘೋಷಿತ ವಿದ್ಯುತ್ ಕಡಿತಗಳ ಬಗ್ಗೆ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ.

ಎಸೆಸೆಲ್ಸಿ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಮುಂಜಾನೆ ಹಾಗೂ ರಾತ್ರಿ ಅಧ್ಯಯನ ಸಮಯದಲ್ಲಿ ನಿರಂತರ ವಿದ್ಯುತ್ ಸರಬರಾಜು ಒದಗಿಸಬೇಕು. ತಕ್ಷಣ ತಾಂತ್ರಿಕ ಪರಿಶೀಲನೆ ಹಾಗೂ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಕಡಿತಗಳು ವಿದ್ಯಾರ್ಥಿಗಳ ಅಧ್ಯಯನ ಸಮಯವನ್ನು ವ್ಯತ್ಯಯಗೊಳಿಸುತ್ತಿದ್ದು, ಆನ್‌ಲೈನ್ ಅಧ್ಯಯನ, ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲಗಳ ಬಳಕೆ ಹಾಗೂ ಸಾಧನಗಳ ಚಾರ್ಜಿಂಗ್‌ಗೆ ಅಡಚಣೆ ಉಂಟಾಗುತ್ತಿದೆ. ಪರೀಕ್ಷೆಗೆ ತಯಾರಾಗುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯದ ಹಿತದೃಷ್ಟಿಯಿಂದ ಈ ವಿಷಯಕ್ಕೆ ಮುಖ್ಯಮಂತ್ರಿ ತಕ್ಷಣ ಸ್ಪಂದಿಸಿ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article