2020ರಲ್ಲಿ ನಡೆದ ಜೋಡಿಕೊಲೆ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ
Tuesday, January 20, 2026
ಮೂಲ್ಕಿ ತಾಲೂಕಿನ ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಎಂಬಲ್ಲಿ ನಡೆದ ಜೋಡಿಕೊಲೆ ಪ್ರಕರಣದ ಆರೋಪಿ ಅಲ್ಫೋನ್ಸ್ ಸಲ್ದಾನ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2020ರ ಎಪ್ರಿಲ್ 29ರಂದು ಆರೋಪಿಯು ಮನೆ ಸಮೀಪದ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜ ಮತ್ತವರ ಪತ್ನಿ ಹೆಲೆನ್ ಡಿಸೋಜ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನು ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬOಧಿಸಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ. ಅಂದು ಮೂಲ್ಕಿ ಠಾಣೆಯ ನಿರೀಕ್ಷಕರಾಗಿದ್ದ ಜಯರಾಮ ಡಿ.ಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಆರಂಭದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ವಿಚಾರಣೆ ನಡೆಸಿದ್ದರು. ಆರೋಪಿಯು ಜೀವಾವಧಿ ಶಿಕ್ಷೆಯೊಂದಿಗೆ 2 ಲಕ್ಷ ರೂ. ದಂಡ ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ವಾದಿಸಿದ್ದರು.