ಶೀರೂರು ವೇದವರ್ಧನ ಶ್ರೀಗಳ ಅದ್ದೂರಿ ಪುರಪ್ರವೇಶ..!
Friday, January 09, 2026
ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ವೇದವರ್ಧನ ಶ್ರೀಗಳ ಪುರ ಪ್ರವೇಶಕ್ಕೆ ಇಂದು ಅದ್ದೂರಿಯ ಚಾಲನೆ ದೊರಕಿದೆ. ವಿವಿಧ ಸಾಂಸ್ಕೃತಿಕ, ಜಾನಪದ ಸೇರಿದಂತೆ ವಿವಿಧ ಕಲಾಪ್ರಕಾರಗಳ ಶೋಭಾಯಾತ್ರೆಯ ಮೂಲಕ ಶೀರೂರು ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು.
ಆಧ್ಯಾತ್ಮಿಕ ಚಿಂತನೆಗಳ ಕ್ರೋಢೀಕರಣಕ್ಕಾಗಿ ಲೋಕ ಸಂಚಾರಕ್ಕೆ ತೆರಳಿದ್ದ ಶೀರೂರು ಶ್ರೀಗಳು ಗುರುವಾರ ಶೀರೂರಿನ ಮೂಲ ಮಠಕ್ಕೆ ಆಗಮಿಸಿದ್ದರು. ಒಂದು ದಿನ ಮೂಲಮಠದಲ್ಲೇ ಕಳೆದ ವೇದವರ್ಧನ ಶ್ರೀಗಳು ಇಂದು ಮುಂಜಾನೆ ಸ್ವರ್ಣ ನದಿಯಲ್ಲಿ ಮಿಂದು ಮೂಲಮಠದ ದೇವರಿಗೆ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಇಳಿ ಸಂಜೆ ವೇಳೆಗೆ ಮೂಲಮಠದ ಪಟ್ಟದ ದೇವರಿಗೆ ಮಹಾ ಪೂಜೆ ಸಲ್ಲಿಸಿ ಕಡಿಯಾಳಿಗೆ ಆಗಮಿಸಿದರು. ಕಡಿಯಾಳಿಯ ಮಹಿಷಮರ್ಧಿನಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದರು.
ಪುರ ಪ್ರವೇಶ ಮೆರವಣಿಗೆ ಕಡಿಯಾಳಿಯಿಂದ ಹೊರಟು ಸಿಟಿ ಬಸ್ ಸ್ಟ್ಯಾಂಡ್ ಹನುಮಾನ್ ವೃತ್ತ, ಕನಕದಾಸ ರಸ್ತೆ ಮೂಲಕ ಕೃಷ್ಣ ಮಠಕ್ಕೆ ಸಾಗಿ ಬಂತು. 1000ಕ್ಕೂ ಅಧಿಕ ಭಜಕರು, ಉಡುಪಿಯ ಸ್ಥಳೀಯ ಜಾನಪದ ತಂಡಗಳು, ವಿವಿಧ ಕಲಾತಂಡಗಳು, ಸಾಂಸ್ಕೃತಿಕ ತಂಡಗಳು ಹಾಗೂ ವಿಶೇಷ ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗು ನೀಡಿತು. ಪುರ ಪ್ರವೇಶ ಮೆರವಣಿಗೆಯಲ್ಲಿ ಈ ಬಾರಿ ನಾಲ್ಕು ತಟ್ಟಿರಾಯನ ವಿಗ್ರಹಗಳು ಗಮನ ಸೆಳೆಯಿತು.



