ಶೀರೂರು ಪರ್ಯಾಯಕ್ಕೆ ಮಟ್ಟುವಿನಿಂದ ಸಾಗಿಬಂತು ಶ್ರೀಕೃಷ್ಣ ಮೆಚ್ಚಿದ ತರಕಾರಿ (Video)
Saturday, January 17, 2026
ಅನಾದಿ ಕಾಲದಿಂದಲೂ ನಡೆದು ಬಂದ ಪದ್ಧತಿಯಂತೆ ಕಟಪಾಡಿಯ ಮಟ್ಟು ಪ್ರದೇಶದಲ್ಲಿ ಬೆಳೆದ ಮಟ್ಟುಗುಳ್ಳವನ್ನು ಶೀರೂರು ಪರ್ಯಾಯದ ಪ್ರಯುಕ್ತ ಉಡುಪಿ ಕೃಷ್ಣಮಠಕ್ಕೆ ಅರ್ಪಿಸಲಾಯಿತು.
ಉಡುಪಿ ಶ್ರೀಕೃಷ್ಣ ಮಠಕ್ಕೂ ಮಟ್ಟು ಪ್ರದೇಶದಲ್ಲಿ ಬೆಳೆಯುವ ಗುಳ್ಳ(ಬದನೆಕಾಯಿ)ಗೂ ಧಾರ್ಮಿಕ ನಂಟಿದೆ. ಕಟಪಾಡಿಯ ಮಟ್ಟು ಪ್ರದೇಶದಲ್ಲಿ ಬೆಳೆನಾಶವಾದಾಗ ಉಡುಪಿ ಕೃಷ್ಣ ಮಠದ ಯತಿ ವಾದಿರಾಜ ಸ್ವಾಮಿಗಳು ಮಂತ್ರಿಸಿ ಕೊಟ್ಟ ವಿಶಿಷ್ಟ ಬೀಜದಿಂದಾಗಿ ಗುಳ್ಳ ಕೃಷಿ ಮಟ್ಟು ಪ್ರದೇಶದಲ್ಲಿ ಪ್ರಾರಂಭವಾಯಿತು ಎನ್ನುವ ಐತಿಹ್ಯವಿದೆ. ಹೀಗಾಗಿ ಬೇರೆ ಭಾಗಗಳಿಗಿಂತಲೂ ಮಟ್ಟು ಪ್ರದೇಶದಲ್ಲಿರುವ ಗುಳ್ಳಕ್ಕೆ ವಿಶಿಷ್ಟ ರುಚಿ ಹಾಗೂ ಬಣ್ಣವಿದೆ. ಅನಾದಿಕಾಲದಿಂದಲೂ ಮಟ್ಟು ಪ್ರದೇಶದಲ್ಲಿ ಬೆಳೆದ ಮಟ್ಟು ಬೆಳೆಯನ್ನು ಶ್ರೀಕೃಷ್ಣ ಮಠಕ್ಕೆ ಪರ್ಯಾಯ ಸಂದರ್ಭದಲ್ಲಿ ಅರ್ಪಿಸುವ ಪದ್ದತಿ ನಡೆದುಕೊಂಡು ಬರುತ್ತಿದೆ.
ಇಂದು ಮಟ್ಟು ಭಾಗದ ಭಕ್ತರು ಮಟ್ಟುಗುಳ್ಳ ಹೊರೆಕಾಣಿಕೆ ಶ್ರೀಕೃಷ್ಣ ಮಠಕ್ಕೆ ಸಮರ್ಪಿಸಿದರು. ನಗರದ ಸಂಸ್ಕೃತ ಕಾಲೇಜಿನ ಮುಂಭಾಗದಲ್ಲಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಟ್ಟು ಭಾಗದ ಭಕ್ತರನ್ನು ಸ್ವಾಗತಿಸಿದರು. ಬಳಿಕ ಗುಳ್ಳ ತುಂಬಿದ ಬುಟ್ಟಿಯನ್ನು ಹೊತ್ತು ಭಕ್ತರು ಸಾಲಾಗಿ ಮೆರವಣಿಗೆ ಮೂಲಕ ರಥಬೀದಿಗೆ ಬಂದು ಬಳಿಕ ಹೊರೆಕಾಣಿಕೆ ಮಂಟಪ ತಲುಪಿದರು.
ಮಟ್ಟು ಗುಳ್ಳ ದೇಶದಲ್ಲೇ ಜಿಐ ಪೇಟೆಂಟ್ ಪಡೆದ ಮೊದಲ ತರಕಾರಿ ಎಂಬ ಖ್ಯಾತಿ ಪಡೆದಿದೆ. ಜೊತೆಗೆ ಕೃಷ್ಣ ಮಠದ ನಿತ್ಯ ಬಳಕೆಯ ತರಕಾರಿಗಳಲ್ಲಿ ಗುಳ್ಳ ತರಕಾರಿಗೆ ವಿಶೇಷ ಸ್ಥಾನವಿದೆ. ಹೊರೆಕಾಣಿಕೆ ಸಮರ್ಪಣೆಯಲ್ಲಿ ಮಟ್ಟು ಭಾಗದ ಭಕ್ತರು, ಡಾ. ಟಿ ಎಸ್ ರಾವ್ , ಪ್ರದೀಪ್ ರಾವ್ , ವಿಷ್ಣು ಪಾಡೀಗಾರ್, ಸುನಿಲ್ ಬಂಗೇರ, ಸರಸ್ವತಿ ಬಂಗೇರ, ಮಟ್ಟಿ ಲಕ್ಷ್ಮೀ ನಾರಾಯಣ ರಾವ್, ಶ್ರೀ ಕಾಂತ್ ಉಪಾಧ್ಯಾಯ, ಸಂದೀಪ್ ಮಂಜ ನರೇಶ್ ಪಾಲನ್, ಸದಾನಂದ ಸುವರ್ಣ, ಜಯ ಪೂಜಾರಿ,ಎಂ ಲಕ್ಷ್ಮಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.