-->
 ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗದ 88ನೇ ಮನೆ ಹಸ್ತಾಂತರ


ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯಡಿ 88ನೇ ಮನೆ ಹಸ್ತಾಂತರ ಕಾರ್ಯಕ್ರಮವು ಬೈಂದೂರು ತಾಲೂಕಿನ ಜಡ್ಕಲ್ ಸಮೀಪದ ಸೆಲ್ಕೋಡ್‌ನಲ್ಲಿ ನಡೆಯಿತು. 


ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿಕ್ ಎಸ್. ನಾಯ್ಕ್ ಅವರಿಗೆ ಶಿರ್ವದ ನಿವೃತ್ತ ಉಪನ್ಯಾಸಕಿ ಶಾರದಾ ಎಂ. ಅವರು ತಮ್ಮ ಪತಿ ಕೃಷ್ಣಮೂರ್ತಿ ಕೆ. ಅವರ ಸ್ಮರಣಾರ್ಥವಾಗಿ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಛಂದೋಗತಿ’ಯನ್ನು ಹಸ್ತಾಂತರಿಸಿದರು. ಜ್ಯೋತಿ ಬೆಳಗಿಸಿ ಮನೆ ಉದ್ಘಾಟಿಸಿದ ಶಾರದಾ ಎಂ., ನನ್ನ ಪತಿ ಕೃಷ್ಣಮೂರ್ತಿ ಅವರಿಗೆ ಛಂದಸ್ಸಿನ ಕುರಿತು ಆಳವಾದ ಆಸಕ್ತಿ ಇತ್ತು. ‘ಛಂದೋಗತಿ’ ಎಂಬ ಕೃತಿಯನ್ನು ಬರೆಯಬೇಕೆಂಬ ಕನಸು ಅವರದ್ದಾಗಿತ್ತು. ಅದು ಈಡೇರದ ಕಾರಣ, ಅವರ ಸ್ಮೃತಿಯಲ್ಲಿ ನಿರ್ಮಿಸಿದ ಈ ಮನೆಗೆ ಅದೇ ಹೆಸರಿಟ್ಟಿದ್ದೇನೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುರಾಜ ಗಂಟಿಹೊಳೆ ಮಾತನಾಡಿ, ಯಕ್ಷಗಾನ ಕಲಾರಂಗದ ಸಾಮಾಜಿಕ, ಶೈಕ್ಷಣಿಕ ಹಾಗೂ ಕಲಾ ಚಟುವಟಿಕೆಗಳು ವಿಸ್ಮಯಕಾರಿಯಾಗಿದೆ. ಇಂತಹ ಸಮಗ್ರ ಕಾರ್ಯರೂಪವನ್ನು ಇತರೆ ಸಂಸ್ಥೆಗಳಿOದ ನಿರೀಕ್ಷಿಸುವುದು ಅಪರೂಪ. ಸಂಸ್ಥೆಯ ಕ್ಲಪ್ತತೆ, ಪರಿಶ್ರಮ, ಪಾರದರ್ಶಕತೆ ಮತ್ತು ಬದ್ಧತೆಗೆ ನಾನು ಶಿರಸಾ ವಂದಿಸುತ್ತೇನೆ ಎಂದರು.

ವೇದಿಕೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಖ್ಯಾತ ವಕೀಲ ರಾಮಚಂದ್ರ ಅಡಿಗ, ಬಿ. ಹರೀಶ್ ತಂತ್ರಿ, ಶಾರದಾ ಎಂ. ಅವರ ಸಹೋದರ ಕೃಷ್ಣ ಭಟ್ ಹಾಗೂ ಪತ್ನಿ ಪರಮೇಶ್ವರೀ, ಸಹೋದರಿ ಸರೋಜ, ಸಹೋದ್ಯೋಗಿ ಸುಬ್ರಹ್ಮಣ್ಯ ಭಟ್, ಸ್ನೇಹಿತೆ ಜೆಸಿಂತಾ, ಮಧುಕರ ಪೂಜಾರಿ, ವಿಠ್ಠಲ ಪೂಜಾರಿ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಯು. ವಿಶ್ವನಾಥ ಶೆಣೈ, ಭುವನಪ್ರಸಾದ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಡಾ. ರಾಘವೇಂದ್ರ ರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾಂಶುಪಾಲ ಅಮರೇಶ್ ಹೆಗಡೆ, ಪತ್ರಕರ್ತ ಪಳ್ಳಿ ಸುರೇಶ್ ಡಿ., ತಂಗಪ್ಪನ್ ಹಾಗೂ ಕಲಾವಿದ ಜಡ್ಕಲ್ ಗೋಪಾಲ ಆಗಮಿಸಿದ್ದರು.

ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು. ಇದು ಡಾ. ಶಾರದಾ ಎಂ. ಅವರ ಪ್ರಾಯೋಜಕತ್ವದ ಎರಡನೇ ಮನೆ ಎಂಬುದನ್ನು ಸಂಸ್ಥೆ ತಿಳಿಸಿದೆ.



Ads on article

Advertise in articles 1

advertising articles 2

Advertise under the article