-->
 ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನವೀಕೃತ ಸಭಾಂಗಣ ಉದ್ಘಾಟನೆ

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನವೀಕೃತ ಸಭಾಂಗಣ ಉದ್ಘಾಟನೆ


ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನವೀಕೃತ ಸಭಾಂಗಣ ಹಾಗೂ ಬೈದಶ್ರೀ ಕಾರ್ಯಾಲಯದ ಉದ್ಘಾಟನಾ ಸಮಾರಂಭ ಮತ್ತು ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭವು ಆದಿಉಡುಪಿಯ ಬೈದಶ್ರೀ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆಯಿತು. 


ನವೀಕೃತ ಸಭಾಂಗಣ, ಕಾರ್ಯಾಲಯ ಮತ್ತು ಕಾರ್ಯಕ್ರಮವನ್ನು ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತುಳುನಾಡಿನ ವೀರಪುರುಷರಾದ ಕೋಟಿ-ಚೆನ್ನಯರು ಆರಾಧನಾ ಕೇಂದ್ರವಾದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಗಳ ಜೀರ್ಣೋದ್ಧಾರ ಮತ್ತು ಪುನರುತ್ಥಾನಕ್ಕೆ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬಹಳಷ್ಟು ಕೊಡುಗೆ ನೀಡಿದೆ. ಎಲ್ಲಾ ಗರೋಡಿಗಳ ಪುನರುತ್ಥಾನದ ವೇಳೆ ಈ ಸಂಸ್ಥೆಯು ನಡೆಸಿದ ಅಧ್ಯಯನ ಯೋಗ್ಯ ಗ್ರಂಥಗಳು ಉತ್ತಮ ಸಹಕಾರ ನೀಡಿದೆ. ಮುಂದೆ ಯುವಜನರಿಗೆ ಗರೋಡಿಗಳಲ್ಲಿ ನಡೆಯುವ ಆರಾಧನಾ ಪದ್ಧತಿ, ಆಚಾರ ವಿಚಾರಗಳ ಬಗ್ಗೆ ತಿಳಿಯಪಡಿಸುವ ನಿಟ್ಟಿನಲ್ಲಿಯೂ ಈ ಸಂಸ್ಥೆ ಮುಂದಾಗ ಬೇಕಿದೆ. ಈ ನಿಟ್ಟಿನಲ್ಲಿ ಬೈದಶ್ರೀ ಸಂಸ್ಥೆಯ ಆವರಣದಲ್ಲಿ ಕೋಟಿ ಚೆನ್ನಯರ ಬೃಹತ್ ಶಿಲಾಮಯ ಮೂರ್ತಿ ಅಳವಡಿಸಲು ಮತ್ತು ಇನ್ನಿತರ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಗೌರವಾಧ್ಯಕ್ಷ ದಾಮೋದರ ಕಲ್ಮಾಡಿ ಮಾತನಾಡಿ,  ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರವು ಹಾಕಿಕೊಂಡಿರುವ ಯೋಜನೆಗಳು ಕಾರ್ಯರೂಪಕ್ಕೆ ಬರುವಂತಹ ಸರ್ವರ ಸಹಕಾರದ ಅಗತ್ಯತೆ ಇದೆ. ಸಂಸ್ಥೆಯ ಆಶಯಗಳನ್ನು ಸಮಾಜದ ಮುಂದೆ ತೆರೆದಿಡುವಲ್ಲಿ ಮತ್ತಷ್ಟು ಯುವಕರ ಸಹಭಾಗಿತ್ವಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಸೂರ್ಯೋದಯ್ ಪೆರಂಪಳ್ಳಿ ಪ್ರಸ್ತಾವನೆಗೈದು ಸಂಸ್ಥೆ ನಡೆದು ಬಂದ ದಾರಿ, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ,  ಸಮಾಜದ ಸರ್ವರ ಸಹಕಾರ ಯಾಚಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಮಹೇಶ್ ಎಂ. ಅಂಚನ್,  ಶ್ರೀ ನಾರಾಯಣ ಗುರು ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹರೀಶ್ವಂದ್ರ ಅಮೀನ್ ಶುಭಾಶಂಸನೆಗೈದರು.

ಸAಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಾಕೇಶ್ ಕೆ. ಮಾತನಾಡಿ, ಶ್ರೀ ಬ್ರಹ್ಮಬೈರ್ಕಳ ಗರಡಿಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಜನರು ಹೆಚ್ಚು ಹೆಚ್ಚಾಗಿ ಭಾಗವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಗರೋಡಿಗಳ ಪೂಜನೆ ಅರ್ಚಕರು, ದರ್ಶನ ಪಾತ್ರಿಗಳು, ಕೋಲ ಕಟ್ಟುವವರ ಸಹಕಾರವೂ ಅಗತ್ಯವಾಗಿ ದೊರಕಬೇಕಿದೆ ಎಂದರು. 

ಹಿರಿಯ ಗರೋಡಿ ಸೇವಕ ಬಾಳ್ಕಟ್ಟ ಬೋಗ್ರ ಪೂಜಾರಿ,  ಬೈದೇರುಗಳ ನೃತ್ಯ ವಿಶಾರದ ಜಯ ಪರವ ನೀರೆ ಅವರನ್ನು ಪ್ರಶಸ್ತಿಫಲಕ, ನಗದು, ಸನ್ಮಾನ ಪತ್ರಗಳನ್ನೊಳಗೊಂಡ 2025- 26ರ ಸಾಲಿನ ಬೈದಶ್ರೀ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಬೊಳ್ಜೆ ಇದರ ಮಾಜಿ ಅಧ್ಯಕ್ಷ ಪ್ರಕಾಶ್ ಟಿ. ಕೋಟ್ಯಾನ್, ರಾಷ್ಟ್ರಮಟ್ಟದ ಬಾಕ್ಸಿಂಗ್ ಕ್ರೀಡಾ ಪಟು ಮಾಸ್ಟರ್ ಸಾಯಿ ವೈಷ್ಣವ್ ದಯಾಕರ್ ಅವರನ್ನು ಗೌರವಿಸಲಾಯಿತು. 

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವಿಶ್ವಸ್ಥ ಮಂಡಳಿ. ಗರೋಡಿಗಳ ಅರ್ಚಕರು, ದರ್ಶನ ಪಾತ್ರಿಗಳು, ಗುರಿಕಾರರು ಮತ್ತು ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಎಮ್. ಕೆ. ಕಲ್ಮಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಮಹೇಶ್ ಸುವರ್ಣ ಬೋಳೂರು ವಂದಿಸಿದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ಉಗ್ಗೆಲ್ಬೆಟ್ಟು ಕಾರ್ಯಕ್ರಮ ನಿರೂಪಿಸಿದರು. 

Ads on article

Advertise in articles 1

advertising articles 2

Advertise under the article