ಡಿಸಿ ಕಚೇರಿಯಲ್ಲಿ ಖಾದಿ ಉಡುಪುಗಳ ಮಾರಾಟ ಮಳಿಗೆ: ಸರ್ಕಾರಿ ನೌಕರರಿಗೆ ಖಾದಿ ಧರಿಸಲು ಪ್ರೇರಣೆ
Wednesday, February 11, 2026
ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಅಂಗವಾಗಿ ಉಡುಪಿ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಖಾದಿ ಉಡುಪುಗಳ ಮಾರಾಟ ಮಳಿಗೆ ಆರಂಭಿಸಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದ ಆವರಣದಲ್ಲಿ ಶ್ರೀ ಭಾರತಾಂಭೆ ಮಹಿಳಾ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಂಘ (ರಿ), ದಾವಣಗೆರೆ ಇವರ ವತಿಯಿಂದ ತಯಾರಿಸಲಾದ ವಿವಿಧ ಖಾದಿ ಉಡುಪುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರು ಮಳಿಗೆಗೆ ಭೇಟಿ ನೀಡಿ ಖಾದಿ ಉಡುಪುಗಳನ್ನು ವೀಕ್ಷಿಸಿದರು ಹಾಗೂ ಖಾದಿ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ವಿದ್ಯಾ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಯು. ಆನಂದ ಜತ್ತನ್, ಕಾರ್ಯದರ್ಶಿ ನಿರ್ಮಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

