ಪೊಲೀಸರಿಗೆ ಮಕ್ಕಳ ರಕ್ಷಣಾ ಕಾಯ್ದೆಯ ಸ್ಪಷ್ಟ ಅರಿವು ಅಗತ್ಯ: ಮನು ಪಟೇಲ್
Saturday, February 07, 2026
ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವಾಗ ಪೊಲೀಸರಿಗೆ ಬಾಲ ನ್ಯಾಯ ಕಾಯ್ದೆಯ ಸ್ಪಷ್ಟ ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಮಕ್ಕಳ ರಕ್ಷಣಾ ಕಾಯ್ದೆಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳೊಂದಿಗೆ ಸಂವೇದನಾಶೀಲವಾಗಿ ವರ್ತಿಸಬೇಕಾಗಿರುವುದರಿಂದ ಇಂತಹ ತರಬೇತಿಗಳು ಬಹಳ ಅಗತ್ಯವೆಂದು ತಿಳಿಸಿದರು. ಸಮವಸ್ತ್ರದಲ್ಲಿರುವ ಪೊಲೀಸರನ್ನು ಕಂಡು ಮಕ್ಕಳು ಭಯಪಡುವ ಸಾಧ್ಯತೆ ಇರುವುದರಿಂದ ಮಕ್ಕಳ ಪ್ರಕರಣಗಳನ್ನು ದೊಡ್ಡವರ ಪ್ರಕರಣಗಳಂತೆ ನೋಡಬಾರದು ಎಂದರು.
ಮಕ್ಕಳು ಅಪಾಯದಲ್ಲಿದ್ದಾಗ ಅಥವಾ ಕಾನೂನಿಗೆ ವಿರುದ್ಧ ಚಟುವಟಿಕೆಯಲ್ಲಿ ಸಿಲುಕಿದಾಗ, ನಿಯಮಾನುಸಾರ ಮತ್ತು ಮಾನವೀಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಸಂತೋಷ್ ಶ್ರೀವತ್ಸವ್, ಮಕ್ಕಳ ಕುರಿತ ದೂರುಗಳಿಗೆ ತ್ವರಿತ ಸ್ಪಂದನೆ ನೀಡಿದರೆ ಅನೇಕ ಮಕ್ಕಳ ಜೀವ ರಕ್ಷಿಸಬಹುದು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಇಂತಹ ಕಾರ್ಯಾಗಾರಗಳು ಪೊಲೀಸರಿಗೆ ಕಾನೂನು ತಿಳುವಳಿಕೆ ಹೆಚ್ಚಿಸಿ ಉತ್ತಮ ಸೇವೆ ನೀಡಲು ಸಹಕಾರಿಯಾಗುತ್ತವೆ ಎಂದರು. ಯುನಿಸೆಫ್ ಪ್ರಾದೇಶಿಕ ಸಂಯೋಜಕ ಡಾ. ಕೊಣಿಲ ರಾಘವೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜೂಹಿ ದಾಮೋದರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
.jpeg)