-->
ಶಿರ್ವದ ಪಾಪನಾಶಿನಿ ನದಿಗೆ ಜಾನುವಾರು ಕಳೆಬರ ಎಸೆದ ಪ್ರಕರಣ: ಆರೋಪಿ ಬಂಧನ

ಶಿರ್ವದ ಪಾಪನಾಶಿನಿ ನದಿಗೆ ಜಾನುವಾರು ಕಳೆಬರ ಎಸೆದ ಪ್ರಕರಣ: ಆರೋಪಿ ಬಂಧನ


ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ ಕೆಳಭಾಗದ ಪಾಪನಾಶಿನಿ ಹೊಳೆಯಲ್ಲಿ ಜಾನುವಾರಿನ ದೇಹದ ಅವಶೇಷಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರ್ವ ಗ್ರಾಮದ ಪದವು ನಿವಾಸಿ ಅಶೋಕ (52) ಬಂಧಿತ ಆರೋಪಿ. ಆರೋಪಿಯಿಂದ ಜಾನುವಾರಿನ ಚರ್ಮ ಹಾಗೂ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೂನ್ 1ರಂದು ಹೊಳೆಯಲ್ಲಿ ಜಾನುವಾರಿನ ಅವಶೇಷಗಳು ಇರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ಶಿರ್ವ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ ಅವರು, ಕಾಪು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಅಪರಾಧ ಪರಿಶೀಲನಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದರು. ಈ ವೇಳೆ ಜಾನುವಾರಿನ ಮೇಲ್ದವಡೆಯ ಭಾಗ, ಎರಡು ಗೆರಸುಗಳು, ಮಾಂಸ ಹಾಗೂ ಹೊಟ್ಟೆಯ ಒಳಭಾಗಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 51/2026ರಡಿ ಕರ್ನಾಟಕ ಜಾನುವಾರು ವಧೆ ತಡೆ ಹಾಗೂ ಸಂರಕ್ಷಣಾ ಕಾಯ್ದೆ-2020ರ ಕಲಂ 4 ಮತ್ತು 12ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಪೊಲೀಸ್ ಉಪಾಧೀಕ್ಷಕರಾದ ವಿಜಯ ಪ್ರಸಾದ್ ಹಾಗೂ ಅಝಮತ್ ಅಲಿ ಅವರ ಮಾರ್ಗದರ್ಶನದಲ್ಲಿ, ಕಾಪು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಶಿರ್ವ ಠಾಣೆಯ ಪಿಎಸ್‌ಐ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ.ಎಸ್., ಸಿಬ್ಬಂದಿಗಳಾದ ಮಂಜುನಾಥ ಅಡಿಗ, ಕಿರಣ್, ಯಲ್ಲಾಲಿಂಗ, ಕಾಪು ಠಾಣೆಯ ರಘು ಹಾಗೂ ಪಡುಬಿದ್ರಿ ಠಾಣೆಯ ರಹಿಮಾನ್ ಮತ್ತು ಸಂದೇಶ್ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Ads on article

Advertise in articles 1

advertising articles 2

Advertise under the article