-->
ಬೇಸಿಗೆ ಆರಂಭದಲ್ಲೇ  ಕಿದಿಯೂರು ಪರಿಸರದಲ್ಲಿ ಕುಡಿಯುವ ನೀರಿಗೆ ತತ್ವಾರ

ಬೇಸಿಗೆ ಆರಂಭದಲ್ಲೇ ಕಿದಿಯೂರು ಪರಿಸರದಲ್ಲಿ ಕುಡಿಯುವ ನೀರಿಗೆ ತತ್ವಾರ


ಉಡುಪಿ ಜಿಲ್ಲೆಯ ಮಲ್ಪೆ ಪಡುಕೆರೆ ಸಮೀಪದ ಕಿದಿಯೂರು ಗರಡಿ ಪರಿಸರದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿಗೆ ತತ್ವಾರ ಬಂದೊದಗಿದೆ. ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ತಲೆದೋರಿದೆ.


ಅಂಬಲಪಾಡಿ ಪಂಚಾಯತ್ ವ್ಯಾಪ್ತಿಗೆ ಬರುವ ಕಿದಿಯೂರು ಗರಡಿ ತೋಟದ ಸುಮಾರು 40 ಮನೆಗಳಿಗೆ ಪಂಚಾಯತ್‌ನಿಂದ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ,. ಕಳೆದ ಒಂದು ತಿಂಗಳಿನಿಂದ ಈ ಸಮಸ್ಯೆ ತಲೆದೋರಿದ್ದು, ಮೂರ್ನಾಲ್ಕು ದಿನಗಳಿಗೊಮ್ಮೆ ಅಲ್ಪ ಸ್ವಲ್ಪ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. 


ಸಮುದ್ರಕ್ಕೆ ಹತ್ತಿರವಿರುವ ಕಿದಿಯೂರು ಗರಡಿ ಪರಿಸರದಲ್ಲಿ ಬಾವಿ ನೀರು ಉಪ್ಪು ಮಿಶ್ರಿತ ನೀರಿನಿಂದ ಕೂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಈ ಭಾಗದ ಜನರು ಪಂಚಾಯತ್ ನೀರನ್ನೇ ಅವಲಂಬಿಸಿದ್ದಾರೆ. ಇತ್ತೀಚೆಗೆ ವಾರಾಹಿ ನೀರು ಪೂರೈಕೆಗಾಗಿ ಪೈಪ್ ಲೈನ್ ಅಳವಡಿಸಲಾಗಿದ್ದು, ಆ ಬಳಿಕ ಪಂಚಾಯತ್ ನೀರು ಕೂಡಾ ಬರುತ್ತಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ದಿನಬಳಕೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಒಂದು ಟ್ಯಾಂಕರ್ ನೀರಿಗೆ 600 ರೂಪಾಯಿ ವ್ಯಯಿಸಬೇಕಾಗಿದೆ. ದುಡಿದ ಹಣದಲ್ಲಿ ದಿನಕ್ಕೆ 600 ರೂಪಾಯಿ ಕುಡಿಯುವ ನೀರಿಗೆ ಮೀಸಲಿಡಬೇಕಾಗಿದ್ದು, ಪಂಚಾಯತ್ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. 

ಬೇಸಿಗೆಯ ಆರಂಭದಲ್ಲೇ ನೀರಿಗೆ ಬರ ಎದುರಾಗಿರುವುದರಿಂದ ಇನ್ನು ಮೇ ತಿಂಗಳವರೆಗೆ ಈ ಭಾಗದ ಪರಿಸ್ಥಿತಿ ಇನ್ನಷ್ಟು ಜಡಿಲವಾಗಲಿದೆ. ಹಾಗಾಗಿ ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕಾಗಿದೆ ಎಂಬ ಆಗ್ರಹ ಕೇಳಿ ಬಂದಿದೆ.



Ads on article

Advertise in articles 1

advertising articles 2

Advertise under the article