‘ಜಿಲ್ಲಾಡಳಿತದ ಕಂಬಳ’ ಎನ್ನುವವರು ಸಂಪೂರ್ಣ ವೆಚ್ಚ ಭರಿಸಲಿ- ಸುನಿಲ್ ಕುಮಾರ್ ಸವಾಲು
ಉಡುಪಿಯ 80 ಬಡಗುಬೆಟ್ಟುವಿನಲ್ಲಿ ಆಯೋಜನೆ ಮಾಡಿರುವ ಕಂಬಳ ಜಿಲ್ಲಾಡಳಿತದ ಕಂಬಳ ಎಂದು ಹೇಳುವವರು ಕಂಬಳದ ಸಂಪೂರ್ಣ ವೆಚ್ಚ ಭರಿಸಲಿ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಸವಾಲು ಹಾಕಿದರು.
80 ಬಡಗುಬೆಟ್ಟು ಸಮೀಪ ಕೋಟಿ ಚೆನ್ನಯ ಕಂಬಳ ಕರೆಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳು ಇಂದು ಜೀವಂತವಾಗಿವೆ. ಇದು ಯಾವುದೂ ಜಿಲ್ಲಾಡಳಿತಕ್ಕೆ ಕಾಣುವುದಿಲ್ಲ. ಉಡುಪಿ ಕಂಬಳ ಕರೆ ಉದ್ಘಾಟನೆಗೆ ಉಸ್ತುವಾರಿ ಸಚಿವರು ಬರಲಿ ಎನ್ನುವವರು ಜಿಲ್ಲೆಯಲ್ಲಿರುವ ಉಳಿದ ಸಮಸ್ಯೆಗಳ ಬಗ್ಗೆಯೂ ಮುತುವರ್ಜಿ ವಹಿಸಲಿ ಎಂದು ಸವಾಲು ಹಾಕಿದರು. ಮಾ. 4ರಂದು ಜಿಲ್ಲಾಡಳಿತದಿಂದ ಗುದ್ದಲಿ ಪೂಜೆ ಮಾಡುತ್ತೇವೆ ಎನ್ನುವವರು ಮೊದಲು ಕಂಬಳಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದೀರಿ ಎನ್ನುವುದನ್ನು ಹೇಳಲಿ. ಕೇವಲ ಫೋಟೋಗ್ರಪಿ, ಇನ್ಸ್ ಸ್ಟಾಗ್ರಾಂಗಾಗಿ ಗುದ್ದಲಿ ಪೂಜೆ ಮಾಡಿದರೆ ಅದರನ್ನು ಮುಂದೆ ನಿರ್ವಹಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು. ಕಂಬಳದ ವಿಚಾರದಲ್ಲಿ ಅನಗತ್ಯ ಗೊಂದಲ, ಅನಾಚಾರ ಮಾಡುವುದು ಸರಿಯಲ್ಲ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಪರಿಶ್ರಮದಿಂದಾಗಿ ಬಡಗುಬೆಟ್ಟು ಪರಿಸರದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆ ನಡೆದಿದೆ. ಈ ವಿಚಾರದಲ್ಲಿ ರಾಜಕಾರಣವನ್ನು ಬೆರೆಸುವ ಪ್ರಯತ್ನ ನಡೆಯುತ್ತಿದೆ. ಮಿಯಾರು ನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆಯುವ ಕಂಬಳಕ್ಕೆ ಎಲ್ಲರ ಸಹಕಾರ ಇದೆ. 20 ವರ್ಷದಿಂದ ಮಿಯಾರಿನಲ್ಲಿ ಕಂಬಳ ನಡೆಯುತ್ತಿದೆ. ಇಲ್ಲಿ ಎಲ್ಲರ ಸಹಕಾರವಿದೆ ಎಂದು ಒತ್ತಿ ಹೇಳಿದರು. ಬಡಗುಬೆಟ್ಟುವಿನಲ್ಲಿ ನಾವು ಇಂದು ಮೊದಲ ಮುಹೂರ್ತ ನೆರವೇರಿಸಿದ್ದೇವೆ. ಈ ಮೊದಲ ಮುಹೂರ್ತ ಅಧಿಕೃತ ಎಂದು ಸುನಿಲ್ ಕುಮಾರ್, ತುಳುನಾಡಿನಲ್ಲಿ ಕಂಬಳ ದೈವಾರಾಧನೆಗೆ ವಿಶೇಷವಾದ ನಂಟಿದೆ. ಕಂಬಳಕ್ಕೆ ವಿಶಿಷ್ಟ ಸ್ಥಾನ ಮಾನ ಇದೆ. ಉಡುಪಿ ಕಂಬಳ ನಡೆಯುವ ವಿಚಾರದಲ್ಲಿಗುರ್ಮೆ ಸುರೇಶ್ ಶೆಟ್ಟಿ ಅವರ ಜೊತೆ ಕರಾವಳಿಯ ಶಾಸಕರಾದ ನಾವೆಲ್ಲರೂ ಇದ್ದೇವೆ ಎಂದರು.