ಮನರೇಗಾ ಉಳಿಸಿ ಪಾದಯಾತ್ರೆ ಗುಂಡಿ ಬಿದ್ದ ರಸ್ತೆಗಳಲ್ಲಿ ಮಾಡಲಿ; ಸಂಜೀವ ಮಠಂದೂರು ವ್ಯಂಗ್ಯ
ಕಾಂಗ್ರೆಸ್ ಪಕ್ಷದವರು ನರೇಗಾ ಉಳಿಸಿ ಎನ್ನುವ ಪಾದಯಾತ್ರೆಯನ್ನು ಕೇಂದ್ರ ಸರಕಾರ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಡುವ ಬದಲು ಗುಂಡಿ ಬಿದ್ದ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಮಾಡಿದರೆ ಉತ್ತಮ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಸಂಜೀವ ಮಠಂದೂರು ವ್ಯಂಗ್ಯವಾಡಿದ್ದಾರೆ.
ಪುತ್ತೂರು ಪ್ರೆಸೆ ಕ್ಲಬ್ ನಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಮೂಲಕ ವಿಕಸಿತ ಭಾರತ್ ಉದ್ಯೋಗ ಮತ್ತು ಆ ಜೀವಿಕಾ ಮಿಷನ್ ಎನ್ನುವ ಹೆಸರಿನಲ್ಲಿ ಮನ್ ರೇಗಾ ಹೆಸರನ್ನು ಬದಲಾಯಿಸಿದೆ. ಅಲ್ಲದೆ ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ಧೇಶದಿಂದ ಬಯೋಮೆಟ್ರಿಕ್ ಹಾಜರಾತಿ ಸೇರಿದಂತೆ ಹಲವು ಪಾರದರ್ಶಕತೆಯನ್ನು ತಂದಿದೆ. ಆದರೆ ಕಾಂಗ್ರೇಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾರಣ ಈ ಬದಲಾವಣೆ ಕಾಂಗ್ರೇಸ್ ನವರಿಗೆ ತೊಂದರೆಯಾಗಿದೆ. ಈ ಕಾರಣಕ್ಕೆ ಯೋಜನೆಯ ಹೆಸರು ಬದಲಾಯಿಸಿದ್ದಾರೆ ಎಂದು ಆರೋಪಿಸಿ ಪಾದಯಾತ್ರೆಯ ಬೀದಿ ರಂಪಾಟ ಮಾಡುತ್ತಿದೆ ಎಂದರು.
ಈ ಹಿಂದೆ ಕೇಂದ್ರ ಸರಕಾರ ಈ ಯೋಜನೆಗೆ ಶೇಕಡಾ 75 ಪಾಲನ್ನು ಭರಿಸುತ್ತಿತ್ತು. ರಾಜ್ಯ ಸರಕಾರ ಶೇಕಡಾ 25 ಭರಿಸುತ್ತಿತ್ತು. ಹೊಸ ಬದಲಾವಣೆಯಲ್ಲಿ ಕೇಂದ್ರ 60 ಶೇಕಡಾ ಮತ್ತು ರಾಜ್ಯ ಸರಕಾರ 40 ಶೇಕಡಾ ಭರಿಸಬೇಕಿದೆ. ಆದರೆ ಈಶಾನ್ಯ ಭಾಗದ ರಾಜ್ಯಗಳಲ್ಲಿ ಕೇಂದ್ರ ಸರಕಾರ 90 ಶೇಕಡಾ ನೀಡುತ್ಗಿದೆ. ಕರ್ನಾಟಕ ರಾಜ್ಯ ಸರಕಾರ ದಿವಾಳಿಯಾದ ಕಾರಣ ತನ್ನ ಪಾಲನ್ನು ಭರಿಸಲಾಗದೆ ಇದೀಗ ಪಾದಯಾತ್ರೆಯಂತಹ ನಾಟಕ ಆಡುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.