-->
ಪಳ್ಳಿ “ಫಿಶ್ ಮೀಲ್“ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ, ತಹಶೀಲ್ದಾರ್ ರಿಂದ ಬೀಗ ಜಡಿಯುವ ಭರವಸೆ

ಪಳ್ಳಿ “ಫಿಶ್ ಮೀಲ್“ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ, ತಹಶೀಲ್ದಾರ್ ರಿಂದ ಬೀಗ ಜಡಿಯುವ ಭರವಸೆ


ಪಡುಬಿದ್ರೆಯಿಂದ ಸ್ಥಳಾಂತರಗೊಂಡು ಕಾರ್ಕಳದ ಪಳ್ಳಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ‘ಫಿಷ್ ಮೀಲ್’ ಘಟಕವನ್ನು ವಿರೋಧಿಸಿ ಗ್ರಾಮಸ್ಥರು ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಪಳ್ಳಿ ಪಂಚಾಯತ್‌ ಮುಂಭಾಗ ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.


ಒಂದು ವೇಳೆ ಫಿಷ್ ಮೀಲ್ ಘಟಕವನ್ನು ಸಂಪೂರ್ಣವಾಗಿ ಬಂದ್ ಮಾಡದೇ ಇದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಮಲೆ ಪರಿಸರದ ಕಂದಾಯ ಸ.ನಂ 229/1ರ 3.60 ಎಕರೆ ಜಾಗದಲ್ಲಿ ಈ ಘಟಕ ನಿರ್ಮಾಣವಾಗುತ್ತಿದ್ದು ಯಾವುದೇ ಅಧಿಕೃತ ಪರವಾನಗಿ ಪಡೆಯದೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ಅಕ್ರಮ ನಿರ್ಮಾಣದ ವಿರುದ್ಧ ಫೆಬ್ರವರಿ 23ರಂದು ಪಂಚಾಯತ್ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸ್ಥಳಕ್ಕೆ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್ ಹಾಗೂ ವಿಎ ಅಭಿಷೇಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದ ತಹಶೀಲ್ದಾರರು, ಫಿಷ್ ಮೀಲ್ ಘಟಕವನ್ನು ಸ್ಥಳಾಂತರಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಅಧಿಕಾರಿಗಳ ಸ್ಥಳ ಪರಿಶೀಲನೆಯ ವೇಳೆ ಗಂಭೀರ ನಿಯಮಬಾಹಿರ ಚಟುವಟಿಕೆಗಳು ಕಂಡುಬಂದಿವೆ. ಇಲ್ಲಿ ಯಾವುದೇ ಭೂಪರಿವರ್ತನೆ, ಇ-ಖಾತಾ ಅಥವಾ ಗ್ರಾಮ ಪಂಚಾಯತ್‌ನಿಂದ ಕಟ್ಟಡ ಪರವಾನಗಿ ಪಡೆಯದೆ ಕಾಮಗಾರಿ ಸುತ್ತಿರುವುದು ಕಂಡುಬಂದಿದೆ. ಕೃಷಿ ಉದ್ದೇಶದ ಬಾವಿಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಈ ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿರುವುದು ದೃಢಪಟ್ಟಿದೆ. ಅಲ್ಲದೆ ಜಮೀನಿನಲ್ಲಿದ್ದ ಮರಗಳನ್ನು ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ತೆರವುಗೊಳಿಸಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ನಿರ್ಮಾಣದ ಉಸ್ತುವಾರಿ ವಹಿಸಿದ್ದವರಿಗೆ ಅಧಿಕೃತ ನೋಟೀಸು ಜಾರಿ ಮಾಡಿದ್ದಾರೆ. ಅಲ್ಲದೆ ನಿಯಮಬಾಹಿರವಾಗಿ ಬಳಸುತ್ತಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಮೆಸ್ಕಾಂ ಬೈಲೂರು ಶಾಖಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಈ ಸಂದರ್ಭದಲ್ಲಿ ಪಳ್ಳಿ ಪಂಚಾಯತಿನ ಮಾಜಿ ಪ್ರತಿನಿಧಿಗಳು ಉಷಾ ಎ ಅಂಚನ್, ಶ್ರೀಕಾಂತ್ ಪ್ರಭು, ಸಂದೀಪ್ ಅಮೀನ್ , ವಿಜಯ್ ಎಂ. ಶೆಟ್ಟಿ, ಸಂತೋಷ್ ಶೆಟ್ಟಿ ನಿಂಜೂರು ಹಾಗೂ ಕೌಡೂರು ಪಂಚಾಯತಿನ ಮಾಜಿ ಪ್ರತಿನಿಧಿ ವಿಶೇಷ್ ದೇವಾಡಿಗ ಸೇರಿ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article