-->
ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದ ಉಡುಪಿ ಮೂಲದ ಯುವಕ ಅನಾರೋಗ್ಯದಿಂದ ನಿಧನ

ಕಾಮಾಕ್ಯ ದೇವಸ್ಥಾನಕ್ಕೆ ತೆರಳಿದ್ದ ಉಡುಪಿ ಮೂಲದ ಯುವಕ ಅನಾರೋಗ್ಯದಿಂದ ನಿಧನ


ಉಡುಪಿಯ ಮೂಡಬೆಟ್ಟು ಗ್ರಾಮದ ಶಂಕರಪುರ ಸರ್ಕಾರಿ ಗುಡ್ಡೆ ಸಮೀಪದ ನಿವಾಸಿ ವ್ಯಾಸರಾಯ ಆಚಾರ್ಯ ಅವರ ಪುತ್ರ ಅಶೋಕ್ ಆಚಾರ್ಯ (33) ಅವರು ಸ್ನೇಹಿತರೊಂದಿಗೆ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ದಿಢೀರ್ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಫೆಬ್ರವರಿ 8ರಂದು ಸ್ನೇಹಿತರೊಂದಿಗೆ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಅಶೋಕ್ ಆಚಾರ್ಯ ಅವರು ಪ್ರಸಾದವನ್ನು ಪ್ಯಾಕ್ ಮಾಡಿಕೊಂಡು ಹೋಟೆಲ್ ರೂಮ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬೆಳಿಗ್ಗೆ ಸ್ನಾನ ಮುಗಿಸಿ ಹೊರಬಂದ ವೇಳೆ ಅವರಿಗೆ ಏಕಾಏಕಿ ರಕ್ತದೊತ್ತಡ ಉಂಟಾಗಿ ತಲೆ ತಿರುಗಿ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ಒಳಗಾದರು. ಇದನ್ನು ಗಮನಿಸಿದ ಸ್ನೇಹಿತರು ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ವೈದ್ಯಕೀಯ ಪರೀಕ್ಷೆಯಲ್ಲಿ ತಲೆಯೊಳಗೆ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿದ್ದು, ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಅಶೋಕ್ ಅವರನ್ನು ಐಸಿಯುವಿಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸುಮಾರು ಒಂದು ವಾರ ಕಾಲ ಅವರ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 15ರಂದು ಮೃತಪಟ್ಟಿರುವುದಾಗಿ ಅವರ ಸಹೋದರ ರಾಜೇಶ್ ಆಚಾರ್ಯ ತಿಳಿಸಿದ್ದಾರೆ.

ಮೃತ ಅಶೋಕ್ ಆಚಾರ್ಯ ಅವರು ಅವಿವಾಹಿತರಾಗಿದ್ದು, ಉಡುಪಿ ಸಂತೆಕಟ್ಟೆ ಪ್ರದೇಶದಲ್ಲಿ ನಿಪುಣ ಮೆಕ್ಯಾನಿಕ್ ಆಗಿ ಪರಿಚಿತರಾಗಿದ್ದರು. ಸರಳ ಸ್ವಭಾವ, ದುಡಿಮೆಯ ಜೀವನದಿಂದ ಸ್ಥಳೀಯರಲ್ಲಿ ಉತ್ತಮ ಹೆಸರು ಗಳಿಸಿದ್ದರು. ಅವರ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article