ಕೆದೂರು ಸರ್ಕಾರಿ ಪ್ರೌಢಶಾಲೆಗೆ ಕಿಡಿಗೇಡಿಗಳಿಂದ ಹಾನಿ; ಪೊಲೀಸರಿಗೆ ದೂರು
Wednesday, February 18, 2026
ಉಡುಪಿಯ ಕೋಟ ಠಾಣಾ ವ್ಯಾಪ್ತಿಯ ಕೆದೂರು ಸರ್ಕಾರಿ ಪ್ರೌಢಶಾಲೆಗೆ ಕಿಡಿಗೇಡಿಗಳು ನುಗ್ಗಿ ಶಾಲಾ ಸೊತ್ತುಗಳಿಗೆ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶಾಲಾ ಆವರಣ ಪ್ರವೇಶಿಸಿದ ಕಿಡಿಗೇಡಿಗಳು ನೋಟಿಸ್ ಬೋರ್ಡ್‌ನ ಗಾಜನ್ನು ಒಡೆದು, ಒಂದು ತರಗತಿ ಕೋಣೆಯೊಳಗೆ ನುಗ್ಗಿ ಗೋಡೆಯ ಮೇಲೆ ಅಳವಡಿಸಿದ್ದ ಬ್ಯಾನರ್‌ಗಳನ್ನು ಕೆಳಗೆ ಹಾಕಿದ್ದಾರೆ. ತರಗತಿ ಕೋಣೆಯೊಳಗೆ ಬೆಂಕಿ ಪೆಟ್ಟಿಗೆ ಹಾಗೂ ಟಿಶ್ಯೂ ಪೇಪರ್‌ಗಳು ಕಂಡುಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಹುಡುಗರ ಶೌಚಾಲಯದಲ್ಲಿದ್ದ ನಳ್ಳಿಗಳನ್ನು ಕಿತ್ತು ಹಾಕಲಾಗಿದ್ದು, ಕೈ ತೊಳೆಯಲು ಅಳವಡಿಸಿದ್ದ ಸ್ಟೀಲ್ ಸಿಂಕನ್ನು ಕಿತ್ತು ಶಾಲೆಯ ಮಧ್ಯದ ಮೈದಾನದಲ್ಲಿ ಬಿಸಾಡಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಲಾ ಆವರಣದ ಭದ್ರತೆ ಕುರಿತು ಪೋಷಕರು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.