-->
 ಕೇಂದ್ರಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ರಸ್ತೆ ತಡೆ, ಪ್ರತಿಭಟನೆ

ಕೇಂದ್ರಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ರಸ್ತೆ ತಡೆ, ಪ್ರತಿಭಟನೆ


ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಕಾರ್ಮಿಕ ನೀತಿಯನ್ನು ವಿರೋಧಿಸಿ ಕರೆ ನೀಡಿದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಪ್ರಯುಕ್ತ ಉಡುಪಿ ಜಿಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಗುರುವಾರ ಉಡುಪಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ರಸ್ತೆ ತಡೆ ನಡೆಸಲಾಯಿತು.


ರೈತರು, ಕಾರ್ಮಿಕರು, ಕೃಷಿ ಕೂಲಿಕಾರರು, ಮಹಿಳೆಯರು, ಬ್ಯಾಂಕ್ ನೌಕರರು, ದಲಿತ ಸಂಘಟನೆಗಳ ಮುಖಂಡರು ಉಡುಪಿ ನಗರದ ಹಳೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೆಎಂ ಮಾರ್ಗ, ಕೋರ್ಟ್ ರಸ್ತೆಯ ಮೂಲಕ ಜೋಡುಕಟ್ಟೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಪ್ರತಿಭಟನಕಾರರು ಜೋಡುಕಟ್ಟೆಯ ಜಂಕ್ಷನ್‌ನ ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿದರು. ಹಲವು ಹೊತ್ತು ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಪೊಲೀಸರು ಪ್ರತಿಭಟನಕಾರ ರನ್ನು ವಶಕ್ಕೆ ಪಡೆದು ರಸ್ತೆ ತೆರವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.


ಇದಕ್ಕೂ ಮುನ್ನಾ ಹಳೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬಡವರಿಗೆ ಸರಕಾರ ಒದಗಿಸಿದ್ದ ಉದ್ಯೋಗದ ಹಕ್ಕು, ಆಹಾರದ ಹಕ್ಕು, ಮಾಹಿತಿ ಹಕ್ಕು ಹಾಗೂ ಶಿಕ್ಷಣದ ಹಕ್ಕುಗಳನ್ನು ಮೋದಿ ಸರಕಾರ ಈಗ ಶಿಥಿಲಗೊಳಿಸುವ ಪ್ರಯತ್ನ ನಡೆಸುತ್ತಿದೆ. ಬಡವರನ್ನು ಇನ್ನಷ್ಟು ಬಡವರನ್ನಾಗಿಸಲು ಹಾಗೂ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಲು ಹಿಡೆನ್ ಅಜೆಂಡಾದೊAದಿಗೆ ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುವ ಸರ್ವಾಧಿಕಾರಿ ಧೋರಣೆಯನ್ನು ಅನು ಸರಿಸುತ್ತಿದೆ ಎಂದು ಟೀಕಿಸಿದರು.ಉಡುಪಿ ಸಹಬಾಳ್ವೆ ಸಂಚಾಲಕ ಪ್ರೊ.ಫಣಿರಾಜ್ ಮಾತನಾಡಿ, 150ವರ್ಷಗಳ ಸತತ ಹೋರಾಟದಿಂದ ಪಡೆದ ಕಾರ್ಮಿಕ ಹಕ್ಕುಗಳನ್ನು ಮೋದಿ ಸರಕಾರ ಈ ನೂತನ ಕಾರ್ಮಿಕ ಸಂಹಿAತೆ ಹೆಸರಿನಲ್ಲಿ ಕೊಲೆ ಮಾಡಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕರ ನಾಲ್ಕು ಸಂಹಿತೆಯನ್ನು ಅನುಷ್ಠಾನಗೊಳಿಸಲು ಈವರೆಗೆ ಬಜೆಟ್‌ನಲ್ಲಿ ಒಂದು ಪೈಸೆ ಹಣ ಕೂಡ ನೀಡಿಲ್ಲ. ಈ ಸಂಹಿತೆ ಕಾರ್ಮಿಕರ ಮೂಗಿಗೆ ತುಪ್ಪ ಹಚ್ಚುವ ಪ್ರಯತ್ನವಾಗಿದೆ. ಇದರೊಂದಿಗೆ ಕಾರ್ಮಿಕರ ಮೋಸ ಮಾಡಲಾಗುತ್ತಿದೆ ಎಂದು ದೂರಿದರು.

ಶೇ.51ರಷ್ಟು ಕಾರ್ಮಿಕರ ಬೆಂಬಲ ಇಲ್ಲದಿದ್ದರೆ ಯಾವುದೇ ಕಾರ್ಮಿಕ ಸಂಘಟನೆಗಳನ್ನು ಕಟ್ಟಲು ಅವಕಾಶ ಇಲ್ಲದಂತೆ ಕಾನೂನು ಮಾಡಲಾಗಿದೆ. ಈ ಮೂಲಕ ಕಾರ್ಮಿಕರ ಬೆನ್ನೆಲುಬು ಮುರಿದು ಚೂರಿ ಹಾಕಿದ್ದಾರೆ. ಅಲ್ಲದೆ ಹೋರಾಟ ಮಾಡಿದ ಕಾರ್ಮಿಕರನ್ನು ಜೈಲಿಗೆ ಅಟ್ಟುವ ಕ್ರೂರ ಅಧಿಕಾರವನ್ನು ಸರಕಾರ ಪಡೆದುಕೊಂಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಉಡುಪಿ ಜಿಲ್ಲಾ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರ ಸಂಘದ ನಾಗೇಶ್ ನಾಯಕ್ ಮಾತನಾಡಿ, ಕೇಂದ್ರ ಸರಕಾರ ಈಗಾಗಲೇ ಹಲವು ಬ್ಯಾಂಕ್‌ಗಳನ್ನು ವಿಲೀನ ಗೊಳಿಸಿದ ಪರಿಣಾಮ ಹಲವು ಬ್ಯಾಂಕ್ ಶಾಖೆಗಳು ಮುಚ್ಚಿವೆ. ಇದರಿಂದ ಮುಂದಿನ ಪೀಳಿಗೆ ಬಹಳಷ್ಟು ಉದ್ಯೋಗ ಅವಕಾಶಗಳನ್ನು ಕಳೆದುಕೊಂಡಿದೆ. ಅದೇ ರೀತಿ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಕಟ್ಟಡ ಸಂಘದ ಅಧ್ಯಕ್ಷ ಸುಭಾಸ್ ನಾಯಕ್, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಸಂಜೀವ ಬಳ್ಕೂರು, ಎಐಟಿಯುಸಿ ಮುಖಂಡರಾದ ಶಶಿಕಲಾ, ಅಂಗನವಾಡಿ ಸಂಘ ಜಿಲ್ಲಾ ಅಧ್ಯಕ್ಷ ಭಾರತಿ ಎಸ್., ಬಿಸಿಯೂಟ ಸಂಘದ ಅಧ್ಯಕ್ಷ ರತ್ನ, ಉಡುಪಿ ಬೀಡಿ ಮುಖಂಡರಾದ ಉಮೇಶ್ ಕುಂದರ್, ಜನರಲ್ ಯೂನಿಯನ್ ಕಾರ್ಯದರ್ಶಿ ರಮೇಶ್, ಸಿಐಟಿಯು ಮುಖಂಡರಾದ ನಳಿನಿ ಎಸ್., ರಾಮ ಕಾರ್ಕಡ, ಸರೋಜ, ಸಾರಿಕ, ಶಾರದ, ಶರ್ಮಿಳ, ಸೌಮ್ಯ, ಶ್ವೇತಾ, ಕುಸುಮ, ಮಂಜುಳ ಗಿರಿಜ, ಸೈಯಾದ್, ಮುರಳಿ, ರಮೇಶ್ ಬ್ರಹ್ಮಾವರ, ರಮೇಶ್, ವಾಮನ ಪೂಜಾರಿ, ನಾಗರಾಜ್, ರಾಮ ಸಾಲ್ಯಾನ್, ಗಣೇಶ್ ನಾಯ್ಕ ಶೇಖರ್ ಆಚಾರ್ಯ, ಸದಾಶಿವ ಪೂಜಾರಿ, ಉಪಸ್ಥಿತರಿದ್ದರು.





 



Ads on article

Advertise in articles 1

advertising articles 2

Advertise under the article