-->
ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಾಗಾಟ; ಮೂವರ ಬಂಧನ

ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಾಗಾಟ; ಮೂವರ ಬಂಧನ


ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ನಿಷೇಧಿತ ಎಂಡಿಎಂಎ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಅಂತರ್‌ರಾಜ್ಯ ಮಾದಕವಸ್ತು ಜಾಲದ ಮೂವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೇರಳ ಕೋಝಿಕೋಡ್ ನಿವಾಸಿ ಮುಹಮ್ಮದ್ ಅಜ್ಮಲ್ ಸಿ, ವಯನಾಡ್ ನಿವಾಸಿ ಇಸ್ಮಾಯಿಲ್ (28) ಹಾಗೂ ಕೋಝಿಕೋಡ್ ನಿವಾಸಿ ಸಂಶೀರ್ (27) ಎಂದು ಗುರುತಿಸಲಾಗಿದೆ. ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಆರೋಪಿಗಳು ವಾಹನದಲ್ಲಿ ತಲವಾರನ್ನು ಇಟ್ಟುಕೊಂಡಿದ್ದು, ಸುಮಾರು ರೂ.5,38,800 ಮೌಲ್ಯದ 53.58 ಗ್ರಾಂ ನಿಷೇಧಿತ ಎಂಡಿಎಂಎ ಮಾದಕವಸ್ತುವನ್ನು ಸಾಗಾಟ ಮಾಡುತ್ತಿದ್ದರು. 

ಆರೋಪಿಗಳಿಂದ ಒಂದು ಕಾರು, ತಲವಾರು, ಮೊಬೈಲ್ ಫೋನ್‌ಗಳು ಹಾಗೂ ರೂ.10,000 ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.25/2026ರಂತೆ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8ಅ, 22(ಅ), 29 ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಕಲಂ 25(1ಃ)(B)ರಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕೇರಳ, ಗೋವಾ ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದುದಾಗಿ ತಿಳಿದುಬಂದಿದೆ. ಕೇರಳ ರಾಜ್ಯದ ಕೋಝಿಕೋಡ್, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳಲ್ಲಿ ಇವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದರೆಂದು ತಿಳಿದುಬಂದಿದೆ.

ಮುಹಮ್ಮದ್ ಅಜ್ಮಲ್ ಸಿ @ ಅಜ್ಜು ಇತ್ತೀಚೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ.04/2026ರ ಎನ್‌ಡಿಪಿಎಸ್ ಕಾಯ್ದೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಅಜ್ಮಲ್‌ನ ಸಹಚರ ಇಸ್ಮಾಯಿಲ್ ಮೇಲೂ ಕೇರಳ ರಾಜ್ಯದ ಕೋಝಿಕೋಡ್ ಜಿಲ್ಲೆಯಲ್ಲಿ ಮಾದಕವಸ್ತು ಸಾಗಾಟ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.

ಪ್ರಕರಣ ಪತ್ತೆ ಕಾರ್ಯದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಡಿ.ಎಸ್.ಬಿ ವಿಭಾಗದ ಪೊಲೀಸ್ ನಿರೀಕ್ಷಕ ನಂದ ಕುಮಾರ್, ಉಪನಿರೀಕ್ಷಕರಾದ ಗುಣಪಾಲ ಹಾಗೂ ಸುಶ್ಮಾ ಜೆ. ಭಂಡಾರಿ ಸೇರಿದಂತೆ ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ್, ಪ್ರಶಾಂತ್ ರೈ, ಪ್ರಶಾಂತ್ ಎಂ., ಪ್ರವೀಣ್ ರೈ, ಹರ್ಷಿತ್ ಹಾಗೂ ಠಾಣಾ ಸಿಬ್ಬಂದಿಗಳಾದ ಪರಮೇಶ್ವರ ಗೌಡ, ಹರೀಶ್, ಸುಬ್ರಹ್ಮಣ್ಯ, ಭೀಮಸೇನ್, ಭವಿತ್ ರೈ, ನಾಗರಾಜ್, ಕಾರ್ತಿಕ್, ಜಿಲ್ಲಾ ಗಣಕಯಂತ್ರ ಸಿಬ್ಬಂದಿಗಳಾದ ದಿವಾಕರ್, ಸಂಪತ್ ಹಾಗೂ ಗೃಹ ರಕ್ಷಕ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ. 

Ads on article

Advertise in articles 1

advertising articles 2

Advertise under the article