ಪತ್ರಿಕೋದ್ಯಮದ ಭೀಷ್ಮ ಪಿ.ರಾಮಯ್ಯ ವಿಧಿವಶ
ಹಿರಿಯ ಪತ್ರಕರ್ತ ಹಾಗೂ ಮಾಜಿ ಎಂಎಲ್‌ಸಿ ಪಿ ರಾಮಯ್ಯ(93) ಅವರು ನಿಧನರಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಪುತ್ರ ಡಾ. ಬಾಲಜಿ ತಿಳಿಸಿದ್ದಾರೆ.
1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ʻದಿ ಹಿಂದೂʼ ಪತ್ರಿಕೆಯಲ್ಲಿ 5 ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ ಇಬ್ಬರು ಪುತ್ರರು, ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗ ಇದ್ದಾರೆ. ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಮನೆ 295/12/1 7 ನೇ ಮೇನ್ 16 ನೇ ಕ್ರಾಸ್ ಇಡಲಾಗುವುದು ಎಂದು ಅವರ ಸೋದರಳಿಯ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾಗಿರುವ ಗಿರೀಶ್ ಲಿಂಗಣ್ಣ ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ,ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು.
ಪಿ. ರಾಮಯ್ಯ (ಹಿಂದೂ ರಾಮಯ್ಯ) ಅವರು ಕರ್ನಾಟಕದ ಪ್ರಸಿದ್ಧ ಹಿರಿಯ ಪತ್ರಕರ್ತರು, ಇವರು ಸುಮಾರು 45 ವರ್ಷಗಳ ಕಾಲ The Hindu ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸತ್ಯ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದ ಇವರನ್ನು ‘ಪತ್ರಿಕೋದ್ಯಮದ ತಪಸ್ವಿ’ ಎಂದು ಕರೆಯಲಾಗುತ್ತದೆ. ಇವರ ಅನುಭವ ಕಥನ “ನಾನು ಹಿಂದೂ ರಾಮಯ್ಯ” ಕೃತಿಯು ಇವರ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಪಿ. ರಾಮಯ್ಯನವರು ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸಂಪರ್ಕಗಳನ್ನು ಬಳಸಿ, ಸರ್ಕಾರದ ನೀತಿ ನಿರೂಪಣೆಗೆ ಕೊಡುಗೆ ನೀಡಿದ್ದರು.