ಉಡುಪಿಯ ಟೋಲ್ ಗೇಟ್ ಗಳಲ್ಲಿ ಅನ್ಯಭಾಷಿಗರಿಂದ ದೌರ್ಜನ್ಯ; ಕರವೇ ಖಂಡನೆ
Monday, February 09, 2026
ಉಡುಪಿ ಜಿಲ್ಲೆಯ ಟೋಲ್ ಗೇಟ್ ಗಳಲ್ಲಿ ಹಿಂದಿ ಭಾಷಿಕರಿಂದ ದೌರ್ಜನ್ಯ ಹೆಚ್ಚಾಗುತ್ತಿದ್ದು, ಕನ್ನಡಿಗರ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಅನ್ಸಾರ್ ಅಹಮ್ಮದ್ ಹೇಳಿದರು.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಕೆಲ ದಿನಗಳ ಹಿಂದೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಮಾಜಿ ಸೈನಿಕರೊಬ್ಬರನ್ನು ಅವಮಾನಿಸಲಾಯಿತು. ಅಲ್ಲದೇ ಕನ್ನಡಪರ ಸಂಘಟನೆ ವಾಹನವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಅವಮಾನಿಸಿದ್ದಾರೆ. ಹಿಂದಿ ಭಾಷಿಕರಿಂದ ಕನ್ನಡಿಗರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿದೆ. ಈ ಘಟನೆ ಪುನರಾವರ್ತನೆ ಆದರೆ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಅಲ್ಲದೇ ಟೋಲ್ ಗೇಟ್ ಗಳಲ್ಲಿ ಅನ್ಯ ರಾಜ್ಯದವರನ್ನು ತೆಗೆದು ಹಾಕಿ ಎಂದು ಒತ್ತಾಯಿಸಿದರು. ಕನ್ನಡಿಗರ ಮೇಲೆ ದೌರ್ಜನ್ಯ ತೋರಿಸುವುದಕ್ಕಾಗಿಯೇ ಅನ್ಯ ಭಾಷಿಕರನ್ನು ಟೋಲ್ ಗೇಟ್ ಗಳಲ್ಲಿ ನೇಮಿಸಿದ್ದಾರೆಯೇ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖರಾದ ಸುಜಯ್ ಪೂಜಾರಿ,ಜ್ಯೋತಿ ಶೇರಿಗಾರ್ತಿ, ಸಯ್ಯದ್ ಇಝಾಜ್, ಸುಧೀರ್ ಪೂಜಾರಿ, ದೇವಕಿ ಬಾರ್ಕೂರು ಉಪಸ್ಥಿತರಿದ್ದರು.