ಬಜೆಟ್‌ನಲ್ಲಿ ಉಡುಪಿ ಜಿಲ್ಲೆಯ ಕಡೆಗಣನೆಗೆ ಆಕ್ರೋಶ; ಮಾ. 14ರಂದು ಬಿಜೆಪಿ ಪ್ರತಿಭಟನೆ
ರಾಜ್ಯ ಬಜೆಟ್ನಲ್ಲಿ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡದೇ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾರ್ಚ್ 14ರಂದು ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಉಡುಪಿ ನಗರ ಮಂಡಲಾಧ್ಯಕ್ಷ ದಿನೇಶ್ ಅಮೀನ್ ಹೇಳಿದರು.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಉಡುಪಿ ನಗರ ಬಿಜೆಪಿ ವತಿಯಿಂದ ಉಡುಪಿಯ ಆದರ್ಶ ಆಸ್ಪತ್ರೆ ಎದುರು ಮಾರ್ಚ್ 14 ರಂದು ಸಂಜೆ 4.30ಕ್ಕೆ ಪ್ರತಿಭಟನೆ ಆಯೋಜಿಸಲಾಗಿದೆ. ಎಂದರು. ಅಂದು ಬಿಜೆಪಿ ಕಚೇರಿಯಿಂದ ಆದರ್ಶ ಆಸ್ಪತ್ರೆ ಎದುರಿನ ಖಾಲಿ ಜಾಗದವರೆಗೆ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನಾಸಭೆಯನ್ನು ಹಮ್ಮಿಕೊಂಡಿದ್ದು, ಒಂದು ಸಾವಿರ ಜನ ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ಬಜೆಟ್ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ನೀಡದೆ ಸರ್ಕಾರವು ಜಿಲ್ಲೆಯ ಅಭಿವೃದ್ಧಿಯನ್ನು ತೀವ್ರವಾಗಿ ಕಡೆಗಣಿಸಿದೆ ಎಂಬ ಆಕ್ರೋಶ ಜಿಲ್ಲೆಯ ಜನರಲ್ಲಿ ಹೆಚ್ಚಾಗಿದೆ. ಕರಾವಳಿ ಭಾಗದ ಜನರು ಆರೋಗ್ಯ, ಶಿಕ್ಷಣ. ಮೀನುಗಾರಿಕೆ, ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರೂ, ಈ ಬಾರಿ ಬಜೆಟ್ನಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆಗಳು ಅಥವಾ ಮಹತ್ವದ ಅನುದಾನ ಘೋಷಣೆ ಆಗದಿರುವುದು ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಹೊಸ ಯೋಜನೆಗಳನ್ನು ಘೋಷಿಸುವ ಮಾತಿರಲಿ ಹಳೆ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಹಾಗೂ ನಿರ್ವಹಣೆಗೂ ಅನುದಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನ್ಯಾಯಸಮ್ಮತ ಅನುದಾನ ನೀಡಬೇಕು. ಇಲ್ಲವಾದರೆ ಜನರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಅಭಿವೃದ್ಧಿಯನ್ನು ತಡೆಯುವ ಯಾವುದೇ ನಿರ್ಲಕ್ಷ್ಯವನ್ನು ಜನರು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ನೀಡಲಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕಿರಣ್ ಕುಮಾರ್, ಪ್ರಭಾಕರ ಪೂಜಾರಿ, ದಿವಾಕರ ಶೆಟ್ಟಿ, ಶ್ರೀವತ್ಸ ಉಪಸ್ಥಿತರಿದ್ದರು.